Sidlaghatta : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಶನಿವಾರ ಆಯೊಜಿಸಲಾಗಿತ್ತು.
ಪ್ರಾಂಶುಪಾಲ ಡಾ.ವಿ.ವೆಂಕಟೇಶ್ ಮಾತನಾಡಿ, ಕೇವಲ ಕಾಲೇಜು ವಿದ್ಯಾರ್ಥಿಗಳಲ್ಲದೆ ಆಸಕ್ತ ದಾನಿಗಳು, ನಾಗರಿಕರು, ಯುವ ಜನರು, ರೈತ ಸಂಘಗಳು, ಕನ್ನಡ ಪರ ಸಂಘಟನೆಗಳು, ಲಯನ್ಸ್, ಕಾರ್ಮಿಕ, ಸೇವಾ ಸಂಸ್ಥೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳವರು ಬಂದು ಭಾಗವಹಿಸಿ ರಕ್ತದಾನ ಯಶಸ್ಸಿಗೆ ಕೈಜೋಡಿಸಿದ್ದಾರೆ ಎಂದರು.
ರಕ್ತದಾನ ಶಿಬಿರದ ಸಂಘಟನಾ ಸಂಚಾಲಕ ಡಾ.ಷಫಿ ಅಹಮದ್ ಮಾತನಾಡಿ, ನಮ್ಮ ಭಾಗದಲ್ಲಿ ಆಸ್ಪತ್ರೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಬಹಳಷ್ಟಿದೆ. ಪ್ರಾಣವನ್ನು ಉಳಿಸುವ ಈ ಕಾರ್ಯದಲ್ಲಿ ನಮ್ಮ ವಿದ್ಯಾರ್ಥಿಗಳ ಜೊತೆ ಸಾರ್ವಜನಿಕರೂ ಕೈಜೋಡಿಸಿರುವುದು ಹರ್ಷದಾಯಕ ಎಂದು ಹೇಳಿದರು.
ಎನ್.ಎಸ್.ಎಸ್ ಘಟಕ ಅಧಿಕಾರಿ ಆದಿನಾರಾಯಣಪ್ಪ ಮಾತನಾಡಿ, ಕಾಲೇಜಿನ ಬಹುತೇಕ ಹೆಣ್ಣುಮಕ್ಕಳು ಗ್ರಾಮೀಣ ಪ್ರದೇಶದಿಂದ ಬರುತ್ತಾರೆ. ಈ ರಕ್ತದಾನ ಶಿಬಿರದಲ್ಲಿ ಅವರ ರಕ್ತ ಪರೀಕ್ಷೆ ನಡೆಸಿ, ಹೀಮೋಗ್ಲೋಬಿನ್ ಕೊರತೆ ಇರುವವರಿಗೆ ವೈದ್ಯರಿಂದ ಅವರಿಗೆ ರಕ್ತಹೀನತೆಯನ್ನು ಸರಿಪಡಿಸಿಕೊಳ್ಳಲು ಮಾಹಿತಿ ಕೊಡಲಾಗುತ್ತಿದೆ. ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸರಿಯಾದ ಪ್ರಮಾಣದಲ್ಲಿ ಕಬ್ಬಿಣದಂಶದ ಅಗತ್ಯವಿದೆ. ದೇಹದಲ್ಲಿ ಕಬ್ಬಿಣದ ಕೊರತೆಯಿದ್ದರೆ ದೇಹವು ಸಾಕಷ್ಟು ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವುದಿಲ್ಲ ಎಂಬ ವಿಚಾರವನ್ನು ವೈದ್ಯರ ಮೂಲಕ ವಿದ್ಯಾರ್ಥಿನಿಯರಿಗೆ ತಿಳಿಸಿಕೊಡಲಾಗುತ್ತಿದೆ ಎಂದರು.
ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ಕೋಲಾರ ಎ.ಸಿ. ತಹಶೀಲ್ದಾರ್ ಕೆ.ಎನ್.ಮಂಜುನಾಥ್ ಮತ್ತು ಸೂರ್ಯನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಗುರುರಾಜರಾವ್, ರವಿಕುಮಾರ್, ಕೋಲಾರ ಎ.ಸಿ. ತಹಶೀಲ್ದಾರ್ ಕೆ.ಎನ್. ಮಂಜುನಾಥ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ವಿಸ್ಡಂ ನಾಗರಾಜ್, ಹೈದರ್ ವಲಿ ಪಾಷ, ಪ್ಯಾರೇಜಾನ್, ಕ್ರೆಸೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತಮೀಮ್ ಅನ್ಸಾರಿ, ಲಯನ್ಸ್ ಕ್ಲಬ್ ಅಧ್ಯಕ್ಷ ಮನೋಹರ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ರಾಮಾಂಜಿ, ಕರವೇ ಅಧ್ಯಕ್ಷ ಸುನಿಲ್, ರೈತ ಮುಖಂಡರಾದ ತಾದೂರು ಮಂಜುನಾಥ್, ಮುನಿನಂಜಪ್ಪ, ಮುನಿಕೆಂಪಣ್ಣ, ಪ್ರತೀಶ್, ಕನ್ನಡ ಉಪನ್ಯಾಸಕ ವಿಜಯೇಂದ್ರ, ಪ್ರಾಧ್ಯಾಪಕ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.