Sidlaghatta : ರಾಜ್ಯದಲ್ಲಿ ಬರಗಾಲ ಬೀಡು ಬಿಟ್ಟಿದ್ದು ರಾಸುಗಳಿಗೆ ಮೇವು ನೀರನ್ನು ಒದಗಿಸಲು ರೈತರು ಹೆಣಗಾಡುವಂತಾಗಿದೆ. ಈ ಸಮಯದಲ್ಲಿ ಬಾಕಿ ಇರುವ ಹಾಲಿಗೆ ನೀಡುವ ಪ್ರೋತ್ಸಾಹ ಧನವನ್ನು ಕೂಡಲೆ ಬಿಡುಗಡೆ ಮಾಡಿ ಸರ್ಕಾರವು ಹೈನುಗಾರರ ಪರ ನಿಲ್ಲಬೇಕಿದೆ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಬರಗಾಲವಿದ್ದರೂ ಸರ್ಕಾರವು ಬಾಕಿ ಇರುವ ಹಾಲಿಗೆ ನೀಡುವ ಪ್ರೋತ್ಸಾಹ ಧನವನ್ನು ನೀಡುತ್ತಿಲ್ಲ. ಕಳೆದ ಅಕ್ಟೋಬರ್‌ನಿಂದ ಇದುವರೆಗೂ ಏಳು ತಿಂಗಳಿಂದಲೂ ಹಾಲಿಗೆ ನೀಡುವ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ ಎಂದರು.
ಬರಗಾಲದ ಸ್ಥಿತಿಯಲ್ಲಿ ಪ್ರೋತ್ಸಹ ಧನ ರೈತರ ಕೈ ಸೇರಿದ್ದರೆ ಬಹಳಷ್ಟು ನೆರವಾಗುತ್ತದೆ. ಹಾಗಾಗಿ ಕೂಡಲೆ ಪ್ರೋತ್ಸಾಹ ಧನ ಬಿಡುಗಡೆ ಮಾಡಲು ಒತ್ತಾಯಿಸಿದರು.
ಹಾಗೆಯೆ ಈ ಹಿಂದೆ ಬರಗಾಲ ಎದುರಾದಾಗ ಸರ್ಕಾರವು ಬರಪೀಡಿತ ತಾಲ್ಲೂಕುಗಳಲ್ಲಿ ಹೋಬಳಿ ಕೇಂದ್ರಗಳಲ್ಲಿ ಗೋಶಾಲೆ ಆರಂಭಿಸಿ ಅಲ್ಲಿ ರೈತರಿಗೆ ಒಣ ಮೇವನ್ನು ವಿತರಿಸಲಾಗುತ್ತಿತ್ತು. ಈ ವ್ಯವಸ್ಥೆಯಲ್ಲಿ ತಾಂತ್ರಿಕವಾಗಿ ಸಾಕಷ್ಟು ಲೋಪ ದೋಷಗಳಿವೆ.
ಆದ್ದರಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಪ್ರತಿ ರೈತನಿಗೂ ಪಶು ಆಹಾರ, ಒಣ ಮೇವು ಹಸಿ ಮೇವು ಇವುಗಳಲ್ಲಿ ಯಾವುದಾದರೂ ಒಂದನ್ನು ಇಲ್ಲವೇ ಮೇವಿನ ಬದಲಿಗೆ ಹಣವನ್ನಾದರೂ ನೀಡಿದರೆ ಎಲ್ಲ ರೈತರಿಗೂ ಸವಲತ್ತು ಸಿಗಲಿದೆ ಎಂದು ಒತ್ತಾಯಿಸಿದರು.
ಅದು ಬಿಟ್ಟು ಹೋಬಳಿ ಕೇಂದ್ರಗಳಲ್ಲಿ ಗೋಶಾಲೆಗಳನ್ನು ತೆರೆದರೆ ಬಹಳಷ್ಟು ರೈತರಿಗೆ ತಮ್ಮ ತಮ್ಮ ಊರಿನಿಂದ ಅಲ್ಲಿಗೆ ಬರಲು ವಾಹನದ ಸೌಕರ್ಯವೂ ಇರುವುದಿಲ್ಲ, ಯಾರನ್ನೋ ಆಶ್ರಯಿಸಬೇಕಾಗುತ್ತದೆ. ಇಲ್ಲವೇ ವಾಹನ ಸೌಕರ್ಯ ಮಾಡಿಕೊಂಡು ಬಂದರೆ ಸರ್ಕಾರ ನೀಡುವ ಮೇವಿಗಿಂತಲೂ ಅದನ್ನು ಸಾಗಾಣಿಕೆ ಮಾಡಲು ಮಾಡುವ ಖರ್ಚೇ ಹೆಚ್ಚಾಗುತ್ತದೆ ಎಂದು ಹೇಳಿದರು.
ಡೇರಿಗಳ ಮೂಲಕ ಮೇವು ಇಲ್ಲವೇ ಪಶು ಆಹಾರ ವಿತರಿಸಿದರೆ ಎಲ್ಲ ರೈತರಿಗೂ ವ್ಯವಸ್ಥಿತವಾಗಿ ಸವಲತ್ತು ಸಿಗಲಿದೆ ಎಂದಿರುವ ಅವರು ರಾಜ್ಯ ಸರ್ಕಾರವು ಕೂಡಲೆ ಪ್ರೋತ್ಸಾಹ ಧನ ವಿತರಿಸಿ, ಬರ ನೀಗಿಸಲು ಮೇವನ್ನು ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.