Sidlaghatta : ಜಗತ್ತಿನಲ್ಲಿ ಹತ್ತು ಹಲವು ನಾಗರಿಕತೆಗಳು ಬೆಳಕಿಗೆ ಬಂದವಾದರೂ ಅಂತಿಮವಾಗಿ ಉಳಿದಿದ್ದು ಬೆಳೆಯುತ್ತಿರುವುದು ಹಿಂದೂ ನಾಗರಿಕತೆ ಮಾತ್ರ. ಹಿಂದೂ ಧರ್ಮಕ್ಕೆ ತನ್ನದೇ ಆದ ಇತಿಹಾಸ, ಸಂಸ್ಕೃತಿ ಭವ್ಯ ಪರಂಪರೆ ಇದೆ. ಸರ್ವಧರ್ಮ ಸಹಿಷ್ಣುತೆಯನ್ನು ಹೊಂದಿದೆ ಹಿಂದೂ ಧರ್ಮ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ನಗರದಲ್ಲಿನ ಬಿಜೆಪಿಯ ಸೇವಾ ಸೌಧ ಕಚೇರಿಯಲ್ಲಿ ಗುರುವಾರ ನಡೆದ ಶ್ರೀರಾಮ ಕ್ಯಾಲೆಂಡರ್ ಬಿಡುಗಡೆ, ಜ.22 ರಂದು ನಡೆಯುವ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ಪ್ರತಿ ಗ್ರಾಮದಲ್ಲೂ ಪೂಜೆ ನಡೆಸಲು ಅಗತ್ಯ ಪೂಜಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಯೋಧ್ಯೆಯಲ್ಲಿ ಜ.22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದ್ದು ಅದನ್ನು ಕಣ್ಣು ತುಂಬಿಕೊಳ್ಳುವ ಅವಕಾಶ ದೊರೆತ ನಾವು ಧನ್ಯರು. ನಮಗಷ್ಟೆ ಇಂತಹ ಪವಿತ್ರ ಅವಕಾಶ ದೊರೆತಿದ್ದು ನಮ್ಮ ಮುಂದಿನ ಪೀಳಿಗೆಗೆ ಭವ್ಯವಾದ ರಾಮ ಮಂದಿರವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ ಎಂದರು.
ನಾವೆಲ್ಲರೂ ಶ್ರೀರಾಮನನ್ನು ಯೌವ್ವನಾ ವ್ಯವಸ್ಥೆಯ ಭಾವಚಿತ್ರ, ಸಿನಿಮಾಗಳ ಮೂಲಕ ನೋಡಿದ್ದೇವೆ. ಆದರೆ ಬಾಲ್ಯದ ಶ್ರೀರಾಮನನ್ನು ನೋಡುವಂತ ಸೌಭಾಗ್ಯ ನಮಗೆ ಸಿಗುತ್ತಿದೆ. ಅದರಲ್ಲೂ ಮೈಸೂರಿನ ಕಲಾವಿದರೆ ರಚಿಸಿರುವ ಬಾಲ ಶ್ರೀರಾಮನ ಮೂರ್ತಿಯನ್ನು ಕಣ್ತುಂಬಿಕೊಳ್ಳುವ ಕ್ಷಣ ನಮ್ಮದಾಗಲಿದೆ ಎಂದರು.
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ನಡೆದಂತ ಅಹಿತಕರ ಘಟನೆ ಮತ್ತೆ ಎಂದಿಗೂ ನಡೆಯದಂತೆ ನೋಡಿಕೊಳ್ಳಬೇಕು. ನಾವು ಎಲ್ಲ ಧರ್ಮಗಳ ಸಹಿಷ್ಣುಗಳಾಗಿದ್ದೇವೆ ನಿಜ. ಅದರಂತೆ ನಮ್ಮ ಧರ್ಮ ನಮ್ಮ ಧಾರ್ಮಿಕ ಭಾವನೆಗಳಿಗೂ ಎಲ್ಲರೂ ಗೌರವ ಕೊಡಬೇಕು. ಇಂತಹ ಘಟನೆಗಳನ್ನು ನಾವೆಲ್ಲರೂ ಖಂಡಿಸಬೇಕು, ಸಮಾಜದಲ್ಲಿ ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವವರಿಗೆ ತಕ್ಕ ಬುದ್ದಿ ಕಲಿಸಬೇಕೆಂದರು.
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು ಅಂದು ಅದೇ ಸಮಯಕ್ಕೆ ನಮ್ಮ ನಮ್ಮ ಊರಿನ ದೇವಾಲಯಗಳಲ್ಲಿ ಪೂಜೆ ಸಲ್ಲಿಸೋಣ, ಮಹಾ ಮಂಗಳಾರತಿ ಮಾಡೋಣ. ಆ ಮೂಲಕ ಇಡೀ ಜಗತ್ತೆ ಕಾಯುತ್ತಿರುವ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗೋಣ. ಅದಕ್ಕೆ ಬೇಕಾದ ಎಲ್ಲ ಪೂಜಾ ಸಾಮಗ್ರಿಗಳನ್ನು ಮನೆ ಮನೆಗೂ ಊರಿಗೂ ತಲುಪಿಸುವ ಕಾರ್ಯ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶ್ರೀರಾಮನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ನಂತರ ನಗರದಲ್ಲಿನ ಕೋಟೆಯ ಶ್ರೀರಾಮ ಮಂದಿರದಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು.
ಜಿಲ್ಲಾಧ್ಯಕ್ಷರಾಗಿ ಎರಡನೇ ಅವಗೆ ಆಯ್ಕೆಯಾದ ರಾಮಲಿಂಗಪ್ಪ, ಮಾಜಿ ಸಚಿವ ಡಾ.ಕೆ.ಸುಧಾಕರ್, ಮಾಜಿ ಶಾಸಕ ಎಂ.ರಾಜಣ್ಣ, ಮುಖಂಡ ಸೀಕಲ್ ರಾಮಚಂದ್ರಗೌಡ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಸೀಕಲ್ ಆನಂದಗೌಡ ಅವರನ್ನು ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ಬಿ.ಸಿ.ನಂದೀಶ್, ರಮೇಶ್, ಆಂಜನೇಯಗೌಡ, ರಜನೀಕಾಂತ್, ಡಾ.ಸತ್ಯನಾರಾಯಣರಾವ್, ಕನಕಪ್ರಸಾದ್ ಹಾಜರಿದ್ದರು.