Sidlaghatta : ಕೇಂದ್ರ ಸರ್ಕಾರ ನೀಡಿರುವ 3,400 ಕೋಟಿ ರೂ.ಗಳ ಬರಪರಿಹಾರದ ಹಣವನ್ನು ಮಾತ್ರವೇ ರೈತರಿಗೆ ನೀಡಿ ರಾಜ್ಯ ಸರ್ಕಾರ ಸುಮ್ಮನಾಗಿದೆ. ರಾಜ್ಯ ಸರ್ಕಾರವು ತನ್ನ ಪಾಲಿನ ಹಣವನ್ನು ರೈತರಿಗೆ ನೀಡಲೇಬೇಕೆಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಬರಗಾಲದ ಸಮಸ್ಯೆಗೆ ರೈತರು ಸಿಲುಕಿಕೊಂಡಾಗ ಅವರಿಗೆ ನೆರವಾಗುವುದು, ಆತ್ಮಸ್ಥೈರ್ಯ ತುಂಬುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಅದರಂತೆ ಕೇಂದ್ರ ಸರ್ಕಾರವು ಹಣ ನೀಡಿ ರೈತರ ಕುರಿತು ಕಾಳಜಿಯ ತಮ್ಮ ನಿಲುವನ್ನು ವ್ಯಕ್ತಪಡಿಸಿದೆ.
ಆದರೆ ರಾಜ್ಯ ಸರ್ಕಾರವು ರೈತರಿಗೆ ಬರ ಪರಿಹಾರ ಕೊಟ್ಟಿದ್ದು ಎಲ್ಲಿ ಎಂದು ಪ್ರಶ್ನಿಸಿರುವ ಅವರು, ಸಿ.ಎಂ ಸಿದ್ದರಾಮಯ್ಯ, ಡಿ.ಸಿ.ಎಂ ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್‌ನವರದ್ದು ರೈತರ ಪರ ಕಾಳಜಿ ರೈತರ ಹಿತ ಕಾಪಾಡುವುದು ಕೇವಲ ಬಾಯಿ ಮಾತಿಗೆ ಮಾತ್ರವೇ ಸೀಮಿತ, ಕೃತಿಯಲ್ಲಿ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ದೂರಿದರು.
ಜತೆಗೆ ಇದೀಗ ವಿತರಿಸುವ ಬರ ಪರಿಹಾರದ ಹಣವೂ ಸಹ ಮಾನದಂಡಗಳಂತೆ ವಿತರಿಸಿಲ್ಲ. ಯಾರಿಗೂ ಕೂಡ 2 ಸಾವಿರ ರೂ.ಗಳಿಗಿಂತಲು ಹೆಚ್ಚು ಪರಿಹಾರದ ಹಣ ಜಮೆ ಆಗಿಯೇ ಇಲ್ಲ. ಸರ್ಕಾರ ರೂಪಿಸಿರುವ ಮಾನದಂಡದಂತೆ ಬರ ಪರಿಹಾರವನ್ನು ಕೂಡಲೆ ವಿತರಿಸಬೇಕೆಂದು ಒತ್ತಾಯಿಸಿದರು.
ಇನ್ನೇನು ಮುಂಗಾರು ಮಳೆ ಶುರುವಾಗಿದ್ದು ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಹಾಗಾಗಿ ಬಿತ್ತನೆ ಬೀಜ, ರಸಗೊಬ್ಬರ, ಜೈವಿಕ ಗೊಬ್ಬರಗಳನ್ನು ಕೊರತೆ ಆಗದಂತೆ, ರಿಯಾಯಿತಿ ಧರದಲ್ಲಿ ವಿತರಿಸಬೇಕು, ಉತ್ತಮ ಗುಣಮಟ್ಟದ ಬಿಜ, ಗೊಬ್ಬರವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.