Sidlaghatta : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೇರೆಲ್ಲ ತಾಲ್ಲೂಕುಗಳಿಗಿಂತ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅತಿ ಹೆಚ್ಚು ಜನರನ್ನು ಬಿಜೆಪಿ ಸದಸ್ಯರನ್ನಾಗಿ ನೋಂದಣಿ ಮಾಡುವ ಗುರಿ ಇದೆ. ನಾನು ಕೂಡ ಪ್ರತಿ ಗ್ರಾಮಕ್ಕೆ ಭೇಟಿ ನೀಡುತ್ತೇನೆ ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರ ಗೌಡ ತಿಳಿಸಿದರು.
ಶಿಡ್ಲಘಟ್ಟದ ಬಿಜೆಪಿ ಸೇವಾಸೌಧದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅತಿ ಹೆಚ್ಚು ನೋಂದಣಿಯಾಗಲು ಎಲ್ಲ ಕಾರ್ಯಕರ್ತರೂ ಪ್ರಯತ್ನ ಮಾಡಬೇಕಿದೆ. ಇತರ ಪಕ್ಷಗಳಂತೆ ಬಿಜೆಪಿ ಅಲ್ಲ. ಬಿಜೆಪಿಯಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಇಂತಹ ಪಕ್ಷವನ್ನು ಬೆಳೆಸಲು ಸದಸ್ಯರ ಸಂಖ್ಯೆ ಹೆಚ್ಚಾಗಬೇಕು. ಪ್ರತಿ ಬೂತ್ ನಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರು ನೋಂದಣಿಯಾಗಬೇಕು. ಕಾರ್ಯಕರ್ತರು ಒಗ್ಗೂಡಿ, ಒಮ್ಮನಸ್ಸಿನಿಂದ ಕೆಲಸ ಮಾಡಿದರೆ ಪಕ್ಷ ಸಂಘಟಿತವಾಗುತ್ತದೆ ಎಂದು ಹೇಳಿದರು.
ಬಿಜೆಪಿ ಅತಿ ದೊಡ್ಡ ಹಾಗೂ ವಿಭಿನ್ನವಾದ ಪಕ್ಷ. ಮೊದಲಿಗೆ ರಾಜಕೀಯ ಆಂದೋಲನದಿಂದ ಆರಂಭವಾದ ಬಿಜೆಪಿ, ಈಗ ಸಾಮಾಜಿಕ ಆಂದೋಲನವಾಗಿ ಬದಲಾಗಿದೆ. ಎಲ್ಲಾ ಹಿಂದುಳಿದ ವರ್ಗದ ಜನರನ್ನು ಅಭಿವೃದ್ಧಿ ಮಾಡಬೇಕು ಎಂಬುದು ಪ್ರಧಾನಿಯವರ ಗುರಿ ಎಂದರು.
ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ, ಡಾ.ಶ್ಯಾಮಾ ಪ್ರಸಾದ್ ಮುಖರ್ಜಿ, ದೀನ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಮೊದಲಾದ ನಾಯಕರು ಬಿಜೆಪಿಯ ಸಂಘಟನೆ ಹೆಚ್ಚಿಸಿದ್ದಾರೆ. ಕಳೆದ ಮೂರು ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಸ್ಥಾನಗಳನ್ನು ಗಳಿಸಿದೆ. ಬಿಜೆಪಿ ಎಂದರೆ ಕಾರ್ಯಕರ್ತರ ಪಕ್ಷವೇ ಹೊರತು, ಒಂದು ಮನೆತನದ ಪಕ್ಷವಲ್ಲ. ಕಡು ಬಡ ಕುಟುಂಬದಲ್ಲಿ ಹುಟ್ಟಿದ ನರೇಂದ್ರ ಮೋದಿ ಪ್ರಧಾನಿಯಾಗಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು.
ಕೇಂದ್ರದಲ್ಲಿ ಬಿಜೆಪಿ ಏನು ಮಾಡುತ್ತಿದೆ ಎಂದು ಕಾರ್ಯಕರ್ತರು ಅರಿಯಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರದ ಎನ್.ಡಿ.ಎ ಸರ್ಕಾರದ ಕುರಿತು ತಪ್ಪು ತಿಳಿವಳಿಕೆ ಮೂಡಿಸುತ್ತಿದೆ. ಇದರಿಂದ ರಾಜಕೀಯವಾಗಿ ಹಿನ್ನಡೆಯಾಗುತ್ತಿದೆ. ಈ ಕುರಿತು ಕಾರ್ಯಕರ್ತರು ಎಚ್ಚೆತ್ತುಕೊಂಡು ಪರಿಶಿಷ್ಟ ವರ್ಗ, ಪಂಗಡದ ಜನರಲ್ಲಿ ಅರಿವು ಮೂಡಿಸಬೇಕು. ರಾಜಕೀಯೇತರವಾಗಿರುವವರು, ಅನ್ಯ ಪಕ್ಷಗಳಲ್ಲಿರುವವರನ್ನೂ ಕರೆತಂದು ಸೇರಿಸಬೇಕು. ಇದು ಸಮುದ್ರವಾದರೆ ಮಾತ್ರ ಪಕ್ಷ ಬೆಳೆಯಲು ಸಾಧ್ಯ. ಹಳಬರಿಗೆ ಉತ್ತಮ ಪ್ರಾತಿನಿಧ್ಯ ನೀಡಬೇಕು. ಅದೇ ರೀತಿ ಹೊಸಬರಿಗೂ ಪ್ರೇರಣೆ ನೀಡಬೇಕು ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಸೀಕಲ್ ಆನಂದ ಗೌಡ, ಗ್ರಾಮಾಂತರ ಮಂಡಲ ಅಧ್ಯಕ್ಷ ನರೇಶ್ ಕುಮಾರ್, ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಗುಪ್ತ, ನಾರಾಯಣ ಸ್ವಾಮಿ, ಮುನಿವೆಂಕಟಪ್ಪ, ನಾಗೇಶ್, ಮೋಹನ್ ಹಾಜರಿದ್ದರು.