Sidlaghatta : ರಾಜ್ಯದಲ್ಲಿನ Congress ಸರ್ಕಾರಕ್ಕೆ ಜನರ ಹಿತ ಮುಖ್ಯವಲ್ಲ. CM ಸಿದ್ದರಾಮಯ್ಯ ಮತ್ತು DCM ಡಿ.ಕೆ.ಶಿವಕುಮಾರ್ ಅವರಿಬ್ಬರಿಗೂ ಅವರವರ ಖುರ್ಚಿ ಉಳಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆರೋಪಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕಬಳ್ಳಾಪುರ ಮಾರ್ಗದ ಹಂಡಿಗನಾಳ ಬಳಿ ಇರುವ ಶ್ರೀಬಾಲಾಜಿ ಕನ್ವೆಂಷನ್ ಹಾಲ್ ನಲ್ಲಿ ಸೋಮವಾರ ನಡೆದ BJP ಹಾಗೂ JDS ಪಕ್ಷದ ಮೈತ್ರಿ ಅಭ್ಯರ್ಥಿ ಮಲ್ಲೇಶ್‌ಬಾಬು ಪರ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಸರಿಯಾದ ಸಮಯಕ್ಕೆ ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮೊರೆಯಿಡುತ್ತಿದ್ದರು. ಇಲ್ಲವೇ ತಮ್ಮ ಬೊಕ್ಕಸದಿಂದ ರೈತರಿಗೆ ಬರ ಪರಿಹಾರದ ಹಣ ನೀಡುತ್ತಿದ್ದರು. ಅದು ಬಿಟ್ಟು ಕೇಂದ್ರದತ್ತ ಬೆಟ್ಟು ಮಾಡಿ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಧಿಕಾರದ ಖುರ್ಚಿ ಉಳಿಸಿಕೊಳ್ಳುವುದು ಬಿಟ್ಟು ಬೇರೆ ಯಾವುದೆ ಅಜೆಂಡಾ ಇಲ್ಲವೇ ಇಲ್ಲ. ನಮ್ಮದು ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು, ದೇಶವನ್ನು ಪ್ರಗತಿಯತ್ತ ಕೊಂಡೊಯ್ದು ಜಗತ್ತಿನ ಮುಂಚೂಣಿ ರಾಷ್ಟ್ರವನ್ನಾಗಿಸಬೇಕಿದೆ, ಅದಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಶಿಡ್ಲಘಟ್ಟ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಜಗತ್ತಿನಲ್ಲಿ ನಮ್ಮ ದೇಶವು ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ದಿ ಕಂಡು ಮುಂಚೂಣಿ ಸ್ಥಾನಕ್ಕೇರಲು ನರೇಂದ್ರ ಮೋದಿ ಅವರಂತ ಧೀಮಂತ ನಾಯಕರಿಂದ ಮಾತ್ರ ಸಾಧ್ಯ. ಹಾಗಾಗಿ ಅವರು ಮೂರನೇ ಬಾರಿಗೆ ಅಲ್ಲ ಅವರು ಇರುವ ತನಕ ಪ್ರಧಾನಿ ಆಗಬೇಕೆಂದು ಹೇಳಿದರು.
ಕುಮಾರಣ್ಣನು ಗೆದ್ದು ಕೇಂದ್ರದಲ್ಲಿ ಮಂತ್ರಿ ಆಗುವುದು ಖಚಿತ. ಅವರೊಂದಿಗೆ ಕೋಲಾರ ಕ್ಷೇತ್ರದ ಮಲ್ಲೇಶ್ ಬಾಬು ಅವರು ಗೆದ್ದು ಸಂಸದರಾಗಿ ಕೋಲಾರದ ಅಭಿವೃದ್ದಿ ಆಗಬೇಕಿದೆ. ಹಾಗಾಗಿ ಈ ಬಾರಿ ಮೈತ್ರಿ ಅಭ್ಯರ್ಥಿ ಮಲ್ಲೇಶ್‌ಬಾಬು ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಸಂಸತ್ತಿಗೆ ಕಳುಹಿಸಬೇಕೆಂದು ಮನವಿ ಮಾಡಿದರು.
ರಾಜಕೀಯ ಹಿನ್ನಲೆಯುಳ್ಳ, ಈ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಹಾಗೂ ಜನರ ನಾಡಿ ಮಿಡಿತ ಬಲ್ಲ ಸರಳ ಸಜ್ಜನಿಕೆಯ ವ್ಯಕ್ತಿ ಮಲ್ಲೇಶ್‌ಬಾಬು ಅವರನ್ನು ಬೆಂಬಲಿಸಿ ಗೆಲ್ಲಿಸಬೇಕು, ಮಲ್ಲೇಶ್‌ಬಾಬು ಗೆದ್ದರೆ ಮೋದಿ ಗೆದ್ದಂತೆ ನೀವು ಮಲ್ಲೇಶ್‌ಬಾಬುಗೆ ಕೊಡುವ ಒಂದೊಂದು ಮತವೂ ಮೋದಿಗೆ ಸೇರುತ್ತದೆ ಎಂದು ಹೇಳಿದ ಅವರು ಶಿಡ್ಲಘಟ್ಟ ಕ್ಷೇತ್ರದಲ್ಲಿ ಹೆಚ್ಚಿನ ಮತಗಳನ್ನು ಎಲ್ಲ ಕಾರ್ಯಕರ್ತರು ಹಾಕಿಸಬೇಕೆಂದು ಕೋರಿದರು.
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಈ ಕ್ಷೇತ್ರದ ಮತದಾರರು ಕಾಂಗ್ರೆಸ್ ನ ಗ್ಯಾರಂಟಿಗಳಿಗೆ ಒಮ್ಮೆ ಯಾಮಾರಿದ್ದು ಸಾಕಾಗಿದೆ ಮತ್ತೆ ಮರುಳಾಗಬಾರದು. ಈ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನ ಕಾರ್ಯಕರ್ತರು ಪ್ರತಿ ಮನೆ ಮನೆಗೂ ಭೇಟಿ ಮಾಡಿ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು.
ಮಲ್ಲೇಶ್ ಬಾಬು ಮೈತ್ರಿ ಅಭ್ಯರ್ಥಿಯಾಗಿದ್ದು ಅವರಿಗೆ ಹೆಚ್ಚಿನ ಮತಗಳನ್ನು ಹಾಕಿಸಿ ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿದರೆ ಮಾತ್ರವೇ ಕೋಲಾರ ಸಂಸತ್ ಕ್ಷೇತ್ರದ ಅಭಿವೃದ್ದಿ ಸಾಧ್ಯವಾಗಲಿದೆ. ಇಲ್ಲವಾದಲ್ಲಿ ಅಭಿವೃದ್ದಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಹಾಗಾಗಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು, ಮುಖಂಡರು ಮೈತ್ರಿ ಧರ್ಮ ಪಾಲಿಸಿ ಮಲ್ಲೇಶ್ ಬಾಬು ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು. ಆಗ ನಾವು ಈ ಕ್ಷೇತ್ರದ ಅಭಿವೃದ್ದಿಗಾಗಿ ಅನುದಾನ, ಯೋಜನೆಗಳನ್ನು ಕೇಳಲು ಹಕ್ಕು ಇರುತ್ತದೆ ಎಂದರು.
ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಮತ ನೀಡಿ ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿ ಈ ಕ್ಷೇತ್ರದ ಅಭಿವೃದ್ದಿಗೆ ಸಹಕರಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಸಂಸದ ಎಸ್.ಮುನಿಸ್ವಾಮಿ, ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಶಾಸಕ ಎಂ.ರಾಜಣ್ಣ, ಅಭ್ಯರ್ಥಿ ಮಲ್ಲೇಶ್‌ಬಾಬು ಅವರ ತಾಯಿ ಮಂಗಮ್ಮ ಮುನಿಸ್ವಾಮಿ ಮಾತನಾಡಿ ಮತಯಾಚಿಸಿದರು.
ಜೆಡಿಎಸ್ ಅಧ್ಯಕ್ಷ ಡಿ.ಬಿ.ವೆಂಕಟೇಶ್, ಬಿಜೆಪಿ ಅಧ್ಯಕ್ಷ ಸೀಕಲ್ ಆನಂದಗೌಡ, ಮುಖಂಡರಾದ ಬಂಕ್ ಮುನಿಯಪ್ಪ, ಅಪ್ಪೇಗೌಡನಹಳ್ಳಿ ಲಕ್ಷ್ಮಿನಾರಾಯಣರೆಡ್ಡಿ, ಕಂಬದಹಳ್ಳಿ ಸುರೇಂದ್ರಗೌಡ, ಬಿ.ನಾರಾಯಣಸ್ವಾಮಿ, ತಾದೂರು ರಘು, ಪಾಪಿರೆಡ್ಡಿ, ಹುಜಗೂರು ರಾಮಯ್ಯ, ಸದಾಶಿವ, ನಂಜಪ್ಪ, ನರೇಶ್, ಡಿ.ಎಂ.ಜಗದೀಶ್ವರ್ ಹಾಜರಿದ್ದರು.