Sidlaghatta : ಮನುಷ್ಯನ ದೊಡ್ಡ ಶತ್ರು ಅವನ ಸೋಮಾರಿತನ. ಹದಿ ಹರೆಯದಲ್ಲಿ ಮನಸ್ಸು ಎಲ್ಲವನ್ನೂ ಬಯಸುತ್ತದೆ. ಎಲ್ಲವನ್ನೂ ಅನುಭವಿಸುವ ಹಾಗೂ ಪಡೆದುಕೊಳ್ಳುವ ತವಕ. ಚಂಚಲ ಮನಸು ಕೇಳಿದಂತೆಲ್ಲಾ ನಡೆದುಕೊಳ್ಳುತ್ತಾರೋ ಅವರು ಖಂಡಿತಾ ಒಂದಲ್ಲ ಒಂದು ದಿನ ಕಷ್ಟಕ್ಕೆ ಸಿಲುಕುತ್ತಾರೆ ಎಂದು ಆದಿಚುಂಚನಗಿರಿ ಮಠದ ಚಿಕ್ಕಬಳ್ಳಾಪುರ ಶಾಖೆಯ ಶ್ರೀಮಂಗಳನಾಥಸ್ವಾಮಿ ತಿಳಿಸಿದರು.
ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ಹನುಮಂತಪುರ ಗೇಟ್ ಬಳಿಯ ಬಿಜಿಎಸ್ ಕಾಲೇಜಿನಲ್ಲಿ ಶನಿವಾರ ನಡೆದ “ಸ್ವಸ್ತಿ-2024” ಕಾರ್ಯಕ್ರಮದಲ್ಲಿ ಆಶೀವರ್ಚನ ನೀಡಿ ಮಾತನಾಡಿದರು.
ಯಾರೂ ದಡ್ಡರಲ್ಲ, ಅವರವರ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಸಮಯ ಮತ್ತು ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು. ಸಾಧನೆಗೆ ಏಕಾಗ್ರತೆ ಮುಖ್ಯ. ನಿರಂತರ ಅಧ್ಯಯನ ತಪಸ್ಸಿನಂತೆ ಮಾಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಹಾಗೂ ಯುವ ಜನರು ತಮ್ಮ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಲು ಉತ್ತಮ ಸನ್ನಡತೆಯ ಸ್ನೇಹಿತರ ಗೆಳೆತನ ಮಾಡಬೇಕು, ಶಿಕ್ಷಕರು ಹೇಳಿದಂತೆ ಕೇಳಬೇಕು, ಗುರು ಹಿರಿಯರ ಮಾತನ್ನು ಆಲಿಸಿ ಪಾಲಿಸಬೇಕು ಎಂದು ನುಡಿದರು.
ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ತಮ್ಮಲ್ಲಿನ ಕೀಳರಿಮೆ ಬಿಡಿ. ಅಂಕಗಳೆ ಬದುಕಲ್ಲ. ಅಂಕಗಳೆ ಬದುಕನ್ನು ಅಳೆಯುವ ಅಂತಿಮ ವಿಧಾನವೂ ಅಲ್ಲ. ಬದುಕಿನಲ್ಲಿ ಅನೇಕ ಅವಕಾಶ ಬರುತ್ತದೆ. ಅವೆಲ್ಲವನ್ನೂ ಸದುಪಯೋಗಪಡಿಸಿಕೊಂಡು ಬದುಕನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡಿಕೊಳ್ಳಬೇಕೆಂದರು.
ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಪೋಷಕರ ಹಾಗೂ ಶಿಕ್ಷಕರ ಪಾತ್ರ ಕುರಿತು ಬಿಜಿಎಸ್ ವಿದ್ಯಾ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ ವಿವರಿಸಿದರು.
ಬಿಜಿಎಸ್ ಕಾಲೇಜಿನ ಪ್ರಿನ್ಸಿಪಾಲ್ ಕೆ.ಮಹದೇವ್, ಡಾ.ಧನಂಜಯರೆಡ್ಡಿ, ಹಿರಿಯ ವಿದ್ಯಾರ್ಥಿಗಳಾದ ಡಾ.ಗಿರೀಶ್, ಲಹರಿ, ತಾಲ್ಲೂಕಿನ ವಿವಿಧ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಹಾಜರಿದ್ದರು.