ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ರಾಮಕೋಟಿ ಕಾರ್ಯಕ್ರಮ ಹಾಗೂ ಶ್ರೀ ಗುಟ್ಟಾಂಜನೇಯ ಸ್ವಾಮಿ ದೇವಾಲಯದ ಬಳಿ ಶ್ರೀರಾಮನವವಿ ಪ್ರಯುಕ್ತ ಬ್ರಹ್ಮರಥೋತ್ಸವ, ಕ್ಷೀರ ಉಟ್ಲು ಹಾಗೂ ಕಾಯಿ ಉಟ್ಲು ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕಾಯಿ ಉಟ್ಲು ಕಂಭಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಒಂದು ಕಡೆ ಉಟ್ಲುಕಂಬದ ಮೇಲೆ ಕುಳಿತು ಉಟ್ಲು ತಿರುಗಿಸುವವರು ಇಬ್ಬರು, ಉಟ್ಲುಕಾಯಿ ಹೊಡೆಯುವವರ ಗುಂಪು ಮತ್ತು ಅವರಿಗೆ ನೀರೆರೆಚುವವರದ್ದೊಂದು ಗುಂಪು, ಇವರ ನಡುವೆ ಸ್ಪರ್ಧೆ ಏರ್ಪಟ್ಟು ಕಾಯಿ ಹೊಡೆಯುವರ ಕಣ್ಣಿಗೆ ನೀರು ಎರಚುವುದು ಒಂದೆಡೆಯಾದರೆ ಕಾಯಿ ಹೊಡೆಯುವವರಿಗೆ ಕಾಯಿ ಸಿಗದಂತೆ ಉಟ್ಲು ತಿರುಗಿಸುವದು ಇವೆಲ್ಲವನ್ನು ತಪ್ಪಿಸಿ ಕಾಯಿ ಹೊಡೆಯುವ ದೃಶ್ಯ ನೋಡುಗರ ಕಣ್ಣಿಗೆ ಮನರಂಜನೆಯಾಗಿತ್ತು.
ರಥವನ್ನು ಸಿಂಗರಿಸಿ ಶ್ರೀ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಇಟ್ಟು ಬೆಳ್ಳೂಟಿ ಗ್ರಾಮದಿಂದ ಗ್ರಾಮಸ್ಥರು ಶ್ರೀ ಗುಟ್ಟಾಂಜನೇಯಸ್ವಾಮಿ ದೇವಾಲಯದವರೆಗೂ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆ ತಂದರು.
ಶ್ರೀರಾಮನವಮಿ ಪ್ರಯುಕ್ತ ನಡೆಯುವ ಹಾಲುಉಟ್ಲು ಹಾಗೂ ಕಾಯಿಉಟ್ಲು ವೀಕ್ಷಿಸಲು ಸುತ್ತಮುತ್ತಲಿನಿಂದ ಆಗಮಿಸಿದ್ದ ಜನರಿಗೆಲ್ಲಾ ಗ್ರಾಮಸ್ಥರು ಹೆಸರು ಬೇಳೆ ಕೋಸಂಬರಿ, ಪಾನಕ ಮಜ್ಜಿಗೆಯನ್ನು ಟ್ರಾಕ್ಟರ್ ಗಳಲ್ಲಿ ತಂದು ವಿತರಣೆ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ಮುರಳಿ, ಸದಸ್ಯ ಬೆಳ್ಳೂಟಿ ಸಂತೋಷ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಸ್.ವೆಂಕಟೇಶ್, ಗ್ರಾಮದ ಮುಖಂಡ ಡಿ.ವಿ.ಚಂದ್ರಪ್ಪ, ಹರೀಶ್.ಬಿ.ಕೆ, ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಮುನಿಕೆಂಪಣ್ಣ, ಭಜನೆ ಮುಖ್ಯಸ್ಥರಾದ ವೆಂಕಟೇಗೌಡ, ಎ.ಎಂ.ವೆಂಕಟೇಶಪ್ಪ, ವಿಜಯಕುಮಾರ್ ಹಾಜರಿದ್ದರು.