Bashettahalli, Sidlaghatta : ಹೆಣ್ಣೆಂದರೆ ಪ್ರಕೃತಿ, ಸಂಸ್ಕೃತಿ ಹಾಗೂ ಸೃಷ್ಟಿಯ ಶಕ್ತಿ, ಮನೆ ಮತ್ತು ಸಮಾಜವನ್ನು ಮುನ್ನಡೆಸುವ ಬೆಳಕು ಎಂದರೆ ತಪ್ಪಾಗಲಾರದು ಎಂದು ಶ್ರೀಸಾಯಿ ಇಂಟರ್ ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಎಂ.ಮಂಜುನಾಥ್ ಹೇಳಿದರು.
ತಾಲ್ಲೂಕಿನ ಬಶೆಟ್ಟಹಳ್ಳಿಯ ಶ್ರೀಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶನಿವಾರ ನಡೆದ ಮಹಿಳಾ ದಿನಾಚರಣೆ ಹಾಗೂ ನೂತನ ತಾಯಂದಿರ ಕ್ಲಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಮಹಿಳೆಯರು ಪುರುಷರಂತೆ ಸಮಾನ ಹಕ್ಕುಳ್ಳವರಾಗಿದ್ದು, ತಮ್ಮಲ್ಲಿನ ಶಕ್ತಿಯನ್ನು ನಂಬಬೇಕು. ಕೀಳರಿಮೆಯ ಮನಸ್ಥಿತಿಯನ್ನು ತೊರೆದಾಗ ಮಾತ್ರ ಸಮಾಜದಲ್ಲಿ ಮುನ್ನಡೆದಬಹುದು,” ಎಂದು ಅವರು ತಿಳಿಸಿದರು.
ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯ ಕೊಡುಗೆ ಅಪಾರವಾಗಿದೆ. ಯಾವುದೇ ಸವಾಲುಗಳಿಗೂ ಅಂಜದೆ ಮುನ್ನಡೆದಾಗ ಮಾತ್ರ ಮಹಿಳೆಯರು ಮುಖ್ಯವಾಹಿನಿಗೆ ಬರಲು ಸಾಧ್ಯ. ಹೀಗಾಗಿ ಸಾಧನೆಯ ಮೆಟ್ಟಿಲತ್ತ ಧೈರ್ಯವಾಗಿ ಹೆಜ್ಜೆ ಹಾಕಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷೆ ದೀಪಾ ಮಂಜುನಾಥ್ ಮಾತನಾಡಿ, “ಮಹಿಳೆ ಅಡುಗೆ ಕೋಣೆಗೆ ಮಾತ್ರ ಸೀಮಿತ ಎಂಬ ಭಾವನೆ ಈಗ ಬದಲಾಗುತ್ತಿದೆ. ಸಮಾನ ಅವಕಾಶ ದೊರೆತರೆ, ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಮೈಲಿಗಲ್ಲು ಸ್ಥಾಪಿಸಲು ಸಾಧ್ಯ. ಈಗಾಗಲೇ ಅನೇಕ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಅವರ ಸ್ಪೂರ್ತಿಯಂತೆ ಮುನ್ನಡೆದರೆ ಯಶಸ್ಸು ಗ್ಯಾರಂಟಿ” ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ, ಆರೋಗ್ಯ ಹಾಗೂ ಅವರ ಸರ್ವಾಂಗೀಣ ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ತಾಯಂದಿರ ಕ್ಲಬ್ ಉದ್ಘಾಟಿಸಲಾಯಿತು.
ಸಾಹಿತಿ ಸೋ.ಸು.ನಾಗೇಂದ್ರನಾಥ್, ಪ್ರಿನ್ಸಿಪಾಲ್ ಶಿವಕುಮಾರ್, ರಾಮಚಂದ್ರನ್, ಶಿಕ್ಷಕರಾದ ಪ್ರೀತಿ, ಕಲಾವತಿ, ಭೂಮಿಕಾ, ಪ್ರಿಯಾಂಕಾ, ಸುಷ್ಮಾ, ಮುಬಾರಕ್, ಅಮರಾವತಿ, ಅಂಜುಮ ಕೃಷ್ಣಾ, ಅಕೋನಾ, ರೂತ್, ಶ್ರೀನಿವಾಸ್, ಗೌತಮ್, ಮಂಜೇಶ್ ನಾಗೇಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.