Sidlaghatta : ಶಿಡ್ಲಘಟ್ಟ ನಗರದ ಬಸ್‌ನಿಲ್ದಾಣದ (Bus Stand) ಬಳಿಯಿರುವ ಅಂಜನಾದ್ರಿ ಪಾರ್ಟಿ ಹಾಲ್ ನಲ್ಲಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಘೋಷ್ಠಿಯಲ್ಲಿ ಭಾಗವಹಿಸಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ, ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ ಬಂಕ್ ಮುನಿಯಪ್ಪ ಮಾತನಾಡಿದರು.
ಸರ್ಕಾರ ಇದೇ ಮೇ 20 ರೊಳಗೆ ಪರಿಶಿಷ್ಠ ಜಾತಿ ಹಾಗೂ ಪಂಗಡಗಳಿಗೆ ಸಂವಿಧಾನಬದ್ದವಾಗಿ ಸಿಗಬೇಕಾದ ಶೇ 15 ರಿಂದ 17 ಹಾಗು ಶೇ 3 ರಿಂದ 7.5 ಗೆ ಮೀಸಲಾತಿಯನ್ನು ಹೆಚ್ಚಿಸಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಶೇ 33 ಕ್ಕೂ ಹೆಚ್ಚಿರುವ ಪರಿಶಿಷ್ಠ ಜಾತಿ ಹಾಗೂ ಪಂಗಡದ ಸಮುದಾಯಗಳಿಗೆ ಸಂವಿಧಾನಬದ್ದವಾಗಿ ಸಿಗಬೇಕಾದ ಮೀಸಲಾತಿ ನೀಡಲು ಆಡಳಿತಾರೂಢ ಸರ್ಕಾರಗಳ ಇಚ್ಚಾಶಕ್ತಿ ಕೊರತೆಯೇ ಕಾರಣ, ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹೆಚ್ಚಿಸಲು ಸಂವಿಧಾನದಲ್ಲಿ ಅವಕಾಶವಿದ್ದರೂ ಆಡಳಿತಾರೂಢ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಮೀಸಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿ ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ಕಳೆದ ಫೆ 10 ರಿಂದ ಈವೆರಗೂ ಸುಮಾರು 95 ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದರೂ ಮೀಸಲಾತಿ ಹೆಚ್ಚಳದ ಬಗ್ಗೆ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಹಾಗಾಗಿ ಇದೇ ಮೇ 20 ರಂದು ರಾಜ್ಯಾಧ್ಯಂತ ಎಲ್ಲಾ ತಾಲ್ಲೂಕುಗಳಲ್ಲಿಯೂ ಸಾಂಕೇತಿಕವಾಗಿ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುತ್ತದೆ. ಆದಷ್ಟು ಬೇಗ ಸರ್ಕಾರ ಪರಿಶಿಷ್ಠ ಜಾತಿ ಹಾಗೂ ಸಮುದಾಯಗಳಿಗೆ ಸಿಗಬೇಕಾದ ಮೀಸಲಾತಿಯನ್ನು ಹೆಚ್ಚಿಸಬೇಕು ಇಲ್ಲವಾದಲ್ಲಿ ಬೃಹತ್ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಒತ್ತಾಯಿಸಿದರು.
ಕದಸಂಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಮಾತನಾಡಿ 1958 ರಲ್ಲಿ ನಿಗಧಿಯಾಗಿದ್ದ ಶೇ 15 ಹಾಗು ಶೇ 3 ರಷ್ಟು ಮೀಸಲಾತಿ ಇವತ್ತಿಗೂ ಹಾಗೆ ಇದೆ. 2011 ರ ಜನಸಂಖ್ಯೆಯ ಆದಾರದಲ್ಲಿ ಶೇ 22 ರಷ್ಟು ಜನಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಕೂಡಲೇ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಲು ನಿವೃತ್ತ ನ್ಯಾಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗದ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮುಗಿಲಡಿಪಿ ನಂಜಪ್ಪ, ಎನ್.ಎ.ವೆಂಕಟೇಶ್, ದ್ಯಾವಕೃಷ್ಣಪ್ಪ, ಹನುಮಪ್ಪ, ದ್ಯಾವಪ್ಪ, ಗಂಗಯ್ಯ, ರಾಜೇಂದ್ರ, ಜೆ.ಎಂ.ವೆಂಕಟೇಶ್ ಹಾಜರಿದ್ದರು.