Appegowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಶುಕ್ರವಾರ 69 ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಪ್ರಾಂಶುಪಾಲ ಎಸ್.ಎ.ಪ್ರಸಾದ್ ಅವರು ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಆಚರಣೆ ಮಾಡಿದರು.
ನಾಡಗೀತೆ, ರಾಷ್ಟ್ರಗೀತೆಯೊಂದಿಗೆ ಧ್ವಜಕ್ಕೆ ವಂದನೆ ಸಲ್ಲಿಸಿದರು. ಶಾಲೆಯ ವಿದ್ಯಾರ್ಥಿಗಳು ಯಕ್ಷಗಾನ ಸೇರಿದಂತೆ ಕನ್ನಡ ಭಾಷೆಯ ಹಿರಿಮೆಯನ್ನು ಸಾರುವ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡಿದರು.
ಶಾಲೆಯ ವಿದ್ಯಾರ್ಥಿಗಳು ಕರ್ನಾಟಕದ ಏಕೀಕರಣ, ಹಾಗೂ ನಾಡಿನ ಕವಿಗಳು, ಸಾಹಿತಿಗಳು, ಸಂತರು, ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಯ ಕುರಿತು ಭಾಷಣ ಮಾಡಿದರು.
ಪ್ರಭಾರಿ ಪ್ರಾಂಶುಪಾಲ ಎಸ್.ಎ. ಪ್ರಸಾದ್ ಮಾತನಾಡಿ, ನಮ್ಮ ನಾಡಿನ ಹಿರಿಮೆಯನ್ನು ಹೆಚ್ಚಿಸುವುದರ ಜೊತೆಗೆ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕಾರ್ಯವನ್ನು ಮಾಡಬೇಕು. ಗಡಿಯ ರಕ್ಷಣೆಯಾಗಬೇಕು. ಕವಿಗಳು, ಸಾಹಿತಿಗಳ ಮಾರ್ಗದರ್ಶನ ಅನುಸರಿಸುವ ಮೂಲಕ ಈ ನಾಡಿನ ಶ್ರೀಮಂತಿಕೆಯನ್ನು ಮತ್ತಷ್ಟು ದ್ವಿಗುಣಗೊಳಿಸಬೇಕು ಎಂದರು.
ಶಾಲೆಯ ಸಹಶಿಕ್ಷಕರಾದ ಡಿ.ಪಿ.ಮುರಳೀಧರ, ಸಿ.ಜೆ.ದಿವಾಕರರೆಡ್ಡಿ, ಜಿ.ಶಶಿದೀಪಿಕಾ, ರಾಮಪ್ಪ ಸಿದ್ದಪ್ಪ ಶಿವಾರಾಯಿ, ಕೆ.ಪಿ.ತ್ರಿವೇಣಿ, ಯಲ್ಲಪ್ಪ ಗದ್ದನಕೇರಿ, ಜಿ.ಎನ್.ನರೇಶ್, ಲಕ್ಷ್ಮೀನಾರಾಯಣ ನಾಯಕ, ಸಿದ್ಧು ಹುಣಸಿಕಟ್ಟ, ಎನ್.ಸಂದ್ಯಾ ಹಾಗೂ ಪೋಷಕರು ಹಾಜರಿದ್ದರು.