Sidlaghatta : ಜಿಲ್ಲೆಯಾದ್ಯಂತ ನೀರಿನ ಅನುಕೂಲ ಇರುವ 9034 ಮಂದಿ ರೈತರಿಗೆ ಮೇವಿನ ಬಿತ್ತನೆ ಜೋಳದ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಒಂದಷ್ಟು ಮೇವಿನ ಕೊರತೆ ನಿವಾರಣೆ ಆಗಲಿದೆ ಎಂದು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ರವಿ ತಿಳಿಸಿದರು.
ಶಿಡ್ಲಘಟ್ಟದಲ್ಲಿ ರೈತರಿಗೆ ಮೇವಿನ ಜೋಳದ ಬಿತ್ತನೆ ಬೀಜದ ಕಿಟ್‌ಗಳನ್ನು ವಿತರಿಸುವ ಕಾರ್ಯವನ್ನು ಪರಿಶೀಲಿಸಿದ ನಂತರ ಮಾತನಾಡಿ, ಪ್ರತಿ ಕಿಟ್ ನಲ್ಲೂ ತಲಾ 6 ಕೆಜಿಯಷ್ಟು ಬಿತ್ತನೆ ಜೋಳದ ಬೀಜ ಇರಲಿದೆ. 10 ಗುಂಟೆಯಲ್ಲಿ ಇದನ್ನು ಬಿತ್ತನೆ ಮಾಡಬಹುದು ಎಂದು ಹೇಳಿದರು.
ಕೊಳವೆ ಬಾವಿಯಿದ್ದು ನೀರಿನ ಅನುಕೂಲ ಇರುವ ರೈತರು ಫ್ರೂಟ್ ಐಡಿ ಅಥವಾ ಪಹಣಿ ನೀಡಿ ಉಚಿತವಾಗಿ ಮೇವಿನ ಜೋಳದ ಬಿತ್ತನೆ ಬೀಜದ ಕಿಟ್ ನ್ನು ಆಯಾ ತಾಲ್ಲೂಕು ಪಶು ವೈದ್ಯಕೀಯ ಇಲಾಖೆ ಕಚೇರಿಯಲ್ಲಿ ಪಡೆಯಬಹುದು ಎಂದರು.
ಈ ಎಲ್ಲ 9034 ಕಿಟ್‌ಗಳ ಬಿತ್ತನೆ ಬೀಜವನ್ನು ಬಿತ್ತನೆ ಮಾಡುವುದರಿಂದ ಉತ್ಪಾದನೆ ಆಗುವ ಮೇವಿನ ಜೋಳವು ಜಿಲ್ಲೆಯಲ್ಲಿನ ಎಲ್ಲ ರಾಸುಗಳಿಗೂ ಒಂದು ವಾರದ ಕಾಲ ಆಗುವಷ್ಟು ಮೇವು ಸಿಗಲಿದೆ. ಕಳೆದ ವರ್ಷ 21 ಸಾವಿರ ಕಿಟ್‌ಗಳನ್ನು ವಿತರಿಸಲಾಗಿತ್ತು ಎಂದು ಹೇಳಿದರು.
ಕಳೆದ ಡಿಸೆಂಬರ್ ನಲ್ಲಿ ವಿತರಿಸಿದ್ದ ಕಿಟ್ ಗಳಲ್ಲಿನ ಬೀಜವನ್ನು ಬಿತ್ತಿದ್ದು ಅದರಿಂದ ಬಂದಿರುವ ಮೇವು ಎರಡು ವಾರಗಳವರೆಗೂ ಸಾಕಾಗಲಿದೆ, ಅದು ಇದೀಗ ಬಳಕೆಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.
ಪರಿಸ್ಥಿತಿ ಕೈ ಮೀರಿಲ್ಲ :
ಜಿಲ್ಲೆಯಲ್ಲಿ ಬರಗಾಲ ಬೀಡು ಬಿಟ್ಟಿದ್ದರೂ ರಾಸುಗಳ ಮೇವಿನ ಸ್ಥಿತಿ ಕೈ ಮೀರಿಲ್ಲ. ಸಧ್ಯದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 15-17 ವಾರಗಳ ಕಾಲ ಸಾಕಾಗುವಷ್ಟು ಹಸಿ ಹಾಗೂ ಒಣ ಮೇವು ದಾಸ್ತಾನು ಇದೆ. ರೈತರು ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಜತೆಗೆ ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಜಿಲ್ಲೆಯ ಎಲ್ಲ ಪ್ರಮುಖ ಕುರಿ ಮೇಕೆ ದನಗಳ ಸಂತೆಯಲ್ಲಿನ ವಹಿವಾಟನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಒಂದು ವೇಳೆ ಮೇವಿನ ಕೊರತೆಯಿಂದಾಗಿ ಕುರಿ ಮೇಕೆ ಅಥವಾ ದನಕರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವಂತ ಸ್ಥಿತಿ ಇದೆಯಾ ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಎಲ್ಲೂ ಕೂಡ ಸಧ್ಯಕ್ಕೆ ಇಂತಹ ಪರಿಸ್ಥಿತಿ ಕಂಡು ಬಂದಿಲ್ಲ ಎಂದರು.
ಟೆಂಡರ್ ಕರೆದಿದೆ :
ಬರದ ಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಒಣ ಹಾಗೂ ಹಸಿ ಮೇವು ಖರೀದಿಗೆ ಈಗಾಗಲೆ ಟೆಂಡರ್‌ನ ಬಿಡ್ ಕರೆಯಲಾಗಿದೆ. ಮೊದಲ ಹಂತದಲ್ಲಿ ಯಾರೂ ಬಿಡ್‌ದಾರರು ಭಾಗವಹಿಸಿರಲಿಲ್ಲ. 2ನೇ ಹಂತದಲ್ಲಿ 6 ಮಂದಿ ಬಿಡ್‌ದಾರರು ಬಿಡ್ ನೀಡಿದ್ದಾರೆ.
ಪ್ರತಿ ಟನ್ ಒಣ ಮೇವಿಗೆ ಸರಕಾರವು 7 ಸಾವಿರ ರೂ.ಬೆಲೆ ನಿಗಪಡಿಸಿದ್ದು ಸಾಗಾಣಿಕೆಗೆ 5250 ರೂ.ಗಳನ್ನು ನೀಡಲಾಗುತ್ತಿದೆ. 7 ಸಾವಿರಕ್ಕಿಂತಲೂ ಕಡಿಮೆ ಬಿಡ್ ನೀಡುವವರಿಗೆ ಗುತ್ತಿಗೆ ನೀಡಲಾಗುವುದು, ಎನ್.ಡಿ.ಆರ್.ಎಫ್.ನ ಅನುದಾನದಲ್ಲಿ ಒಣ ಮೇವನ್ನು ಖರೀಸಲಾಗುತ್ತದೆ ಎಂದು ಹೇಳಿದರು.