ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪ್ರತ್ಯೇಕವಾದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ ನಿರ್ಮಾಣ ಮಾಡುವಂತೆ ರೈತರ ಹಲವು ವರ್ಷಗಳ ಹೋರಾಟಕ್ಕೆ ಫಲ ದೊರೆಯುವ ಸಮಯ ಸನ್ನಿಹಿತವಾಗುತ್ತಿದೆ. ತಾಲ್ಲೂಕಿನ ಚೌಡಸಂದ್ರ ಬಳಿಯ ತೋಟಗಾರಿಕೆ ಫಾರಂ ಜಾಗದಲ್ಲಿ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ ನಿರ್ಮಾಣವಾಗುವುದು ಬಹುತೇಕ ಖಚಿತವಾಗಿದೆ.
ಶಿಡ್ಲಘಟ್ಟ-ವಿಜಯಪುರ ಮಾರ್ಗವಾಗಿ ಬೆಂಗಳೂರು ಮಾರ್ಗದಲ್ಲಿನ ಚೌಡಸಂದ್ರದ ಬಳಿ ಇರುವ ತೋಟಗಾರಿಕೆ ಫಾರಂನ 10 ಎಕರೆ ಜಾಗವು ಎಪಿಎಂಸಿ ಮಾರುಕಟ್ಟೆ ಪ್ರಾಂಗಣ ನಿರ್ಮಾಣಕ್ಕೆ ಸೂಕ್ತವಾಗಲಿದೆಯೆ ಎನ್ನುವುದನ್ನು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಸರ್ಕಾರದಿಂದ ಪ್ರಸ್ತಾಪ ಬಂದಿದೆ.
ಈ ಹಿನ್ನಲೆಯಲ್ಲಿ ಎಪಿಎಂಸಿ ಅಧ್ಯಕ್ಷ ಇನಪ್ಪನಹಳ್ಳಿ ನಾರಾಯಣಸ್ವಾಮಿ, ಕಾರ‍್ಯದರ್ಶಿ ಹಕೀಂ, ನಿರ್ದೇಶಕರುಗಳಾದ ಮೇಲೂರು ಮುರಳಿ ಇನ್ನಿತರರ ತಂಡವು ಚೌಡಸಂದ್ರ ತೋಟಗಾರಿಕೆ ಫಾರಂಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರ ಎಪಿಎಂಸಿಯಿಂದ ಶಿಡ್ಲಘಟ್ಟವನ್ನು ಪ್ರತ್ಯೇಕಿಸಿ ತೋಟಗಾರಿಕೆ ಇಲಾಖೆಗೆ ಸೇರಿದ ಈ ಜಾಗದಲ್ಲಿ ಎಪಿಎಂಸಿ ಪ್ರಾಂಗಣ ನಿರ್ಮಾಣ ಮಾಡಲು ಈ ಸ್ಥಳ ಸೂಕ್ತವಾ ಇಲ್ಲವಾ ಎನ್ನುವದನ್ನು ಪರಿಶೀಲಿಸಲು ಸ್ಥಳಕ್ಕೆ ಬಂದಿದ್ದೇವೆ.
ಇಲ್ಲಿನ 10 ಎಕರೆ ಜಾಗವು ಎಪಿಎಂಸಿ ಮಾರುಕಟ್ಟೆ ಪ್ರಾಂಗಣ ನಿರ್ಮಾಣ ಮಾಡಲು ಸೂಕ್ತವಾಗಿದ್ದು ಈ ಬಗ್ಗೆ ಮಾರುಕಟ್ಟೆ ಸಮಿತಿಯ ಸಭೆಯಲ್ಲಿ ಮಂಡಿಸಿ ಸರಕಾರಕ್ಕೆ ವರದಿ ಸಲ್ಲಿಸುವ ಕಾರ‍್ಯವನ್ನು ಅಧಿಕಾರಿಗಳು ಮಾಡಲಿದ್ದಾರೆ.
ಮಾರುಕಟ್ಟೆ ಪ್ರಾಂಗಣ ನಿರ್ಮಾಣಕ್ಕೆ ಅಗತ್ಯವಾದ ಹಣವೂ ಲಭ್ಯವಿದೆ. ತೋಟಗಾರಿಕೆ ಇಲಾಖೆಯ ಜಾಗವನ್ನು ಮಾರುಕಟ್ಟೆ ನಿರ್ಮಾಣಕ್ಕಾಗಿ ಹಸ್ತಾಂತರಿಸಲು ಸರ್ಕಾರದ ಮಟ್ಟದಲ್ಲಿ ಒಪ್ಪಿಗೆಯೂ ದೊರೆತಿದೆ. ಸಹಕಾರ ಇಲಾಖೆ, ತೋಟಗಾರಿಕೆ ಇಲಾಖೆಯ ಸಚಿವರು, ಹಿರಿಯ ಅಧಿಕಾರಿಗಳ ನಡುವೆ ಮಾತುಕತೆಯೂ ನಡೆದಿದೆ ಎಂದು ವಿವರಿಸಿದರು.
ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯ ಕಾರ‍್ಯದರ್ಶಿ ಹಕೀಂ, ನಿರ್ದೇಶಕರುಗಳಾದ ಮೇಲೂರು ಮುರಳಿ, ದೊಗರನಾಯಕನಹಳ್ಳಿ ವೆಂಕಟೇಶ್, ಕೋಟಗಲ್ ಹನುಮಪ್ಪ, ಮಾಜಿ ಉಪಾಧ್ಯಕ್ಷ ಬೆಳ್ಳೂಟಿ ವೆಂಕಟೇಶ್ ಭೇಟಿ ನೀಡಿದ್ದರು.
ಶಿಡ್ಲಘಟ್ಟ-ಬೆಂಗಳೂರು ಮಾರ್ಗದಲ್ಲಿರುವ ಈ ಜಾಗವು ಬೆಂಗಳೂರು ವಿಮಾನ ನಿಲ್ದಾಣಕ್ಕೂ ಸಮೀಪವಿದ್ದು ಉತ್ತಮ ರಸ್ತೆ ಸಂಪರ್ಕವೂ ಇದೆ. ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಹೇಳಿ ಮಾಡಿಸಿದ ಜಾಗ ಇದಾಗಿದ್ದು ಮಾರುಕಟ್ಟೆ ನಿರ್ಮಾಣಕ್ಕೆ ಈ 10 ಎಕರೆ ಜಾಗ ಸಾಕಾಗಲಿದೆ. ಕಾರ‍್ಯದರ್ಶಿ ನೇತೃತ್ವದ ನಮ್ಮ ತಂಡ ಜಾಗ ಪರಿಶೀಲಿಸಿದ್ದು ಸಮಿತಿ ಸಭೆಯಲ್ಲಿ ಈ ಜಾಗವನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಿದ್ದು ಸರ್ಕಾರದ ಒಪ್ಪಿಗೆ ನಂತರ ಜಾಗದ ಹಸ್ತಾಂತರ ಹಾಗೂ ಮಾರುಕಟ್ಟೆ ಪ್ರಾಂಗಣ ನಿರ್ಮಾಣ ಚಟುವಟಿಕೆಗಳನ್ನು ಆರಂಭಿಸಲಾಗುವುದು. -ಮೇಲೂರು ಮುರಳಿ, ಎಪಿಎಂಸಿ ನಿರ್ದೇಶಕ, ಶಿಡ್ಲಘಟ್ಟ.