Sidlaghatta : ಶಿಡ್ಲಘಟ್ಟ ನಗರಕ್ಕೆ ಹೊಂದಿಕೊಂಡಿರುವ ಅಮ್ಮನಕೆರೆಗೆ HN ವ್ಯಾಲಿಯ ನೀರು ಹರಿದು ಬರಲಿದ್ದು ಕೆರೆಯಲ್ಲಿನ ತೆರೆದ ಕೊಳವೆ ಬಾವಿಗಳನ್ನು ಕೂಡಲೆ ಮುಚ್ಚಲು ನಗರಸಭೆಯು ಕ್ರಮವಹಿಸಬೇಕೆಂದು ಹಸಿರು ಸೇನೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಆಗ್ರಹಿಸಿದ್ದಾರೆ.
ನಗರಕ್ಕೆ ಕುಡಿಯುವ ನೀರು ಪೂರೈಸಲು ಕೊರೆಸಿರುವ ಸುಮಾರು 27 ತೆರೆದ ಕೊಳವೆ ಬಾವಿಗಳು ಅಮ್ಮನ ಕೆರೆಯಲ್ಲಿವೆ.ಕೆರೆಗೆ ಹರಿದು ಬರುವ ಎಚ್.ಎನ್. ವ್ಯಾಲಿಯ ನೀರು ತೆರೆದ ಬಾವಿಗಳಿಗೆ ನೀರು ತುಂಬಿಕೊಳ್ಳುತ್ತಿದ್ದು ಕೆರೆಯಲ್ಲಿ ನೀರು ನಿಲ್ಲುತ್ತಿಲ್ಲ ಎಂದು ದೂರಿದರು.
ಈಗಾಗಲೆ ನಗರಸಭೆಗೆ ಈ ಬಗ್ಗೆ ತಿಳಿಸಿದ್ದರೂ ಇನ್ನು ಕೂಡ ತೆರೆದ ಕೊಳವೆಬಾವಿಗಳನ್ನು ಮುಚ್ಚುವ ಕೆಲಸ ಮಾಡಿಲ್ಲ. ಈಗಾಗಲೆ ಗುಡಿಹಳ್ಳಿ ಕೆರೆ ತುಂಬಿ ವರದನಾಯಕನಹಳ್ಳಿ ಕೆರೆ ಮೂಲಕ ಅಮ್ಮನಕೆರೆಗೆ ಈಗಾಗಲೆ ಎಚ್‌ಎನ್ ವ್ಯಾಲಿ ನೀರು ಹರಿದು ಬರತೊಡಗಿವೆ.
ಕಳೆದ 6 ತಿಂಗಳ ಹಿಂದೆ ಎಚ್.ಎನ್. ವ್ಯಾಲಿ ನೀರು ಹರಿದು ಕೆರೆ ತುಂಬಿದಾಗ ಸಾಕಷ್ಟು ನೀರು ಕೆರೆಯಲ್ಲಿನ ತೆರೆದ ಕೊಳವೆ ಬಾವಿಗಳಲ್ಲಿ ತುಂಬಿ ಅಂತರ್ಜಲ ಸೇರಿದ್ದರಿಂದ ಕೆರೆಯಲ್ಲಿ ನೀರು ನಿಲ್ಲದಂತಾಗಿತ್ತು. ಇದೀಗ ಮತ್ತೆ ಆ ಸಮಸ್ಯೆ ಪುನರಾವರ್ತನೆ ಆಗಬಾರದು ಎಂದರು. ಹಾಗಾಗಿ ಕೂಡಲೆ ನಗರಸಭೆಯವರು ಕೆರೆಯಲ್ಲಿನ ತೆರೆದ ಕೊಳವೆ ಬಾವಿಗಳನ್ನು ಮುಚ್ಚಬೇಕೆಂದು ಅವರು ಮನವಿ ಮಾಡಿದರು.