ಸರ್ಕಾರದಿಂದ ನಡೆಯುವ ಯಾವುದೇ ಅಭಿವೃದ್ದಿ ಕೆಲಸಗಳನ್ನು ಗ್ರಾಮದಲ್ಲಿ ಎಲ್ಲರೂ ಒಂದಾಗಿ ಜಾತಿ ಮತ ಪಕ್ಷದ ತಾರತಮ್ಯ ಇಲ್ಲದೆ ಉಪಯೋಗ ಪಡೆದುಕೊಳ್ಳಬೇಕು ಎಂದು ವೀರಾಪುರ ಗ್ರಾಮ ಪಂಚಾಯಿತಿ ಸದಸ್ಯ ಡಿ.ವೆಂಕಟೇಶ್ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕು ದೇವರಮಳ್ಳೂರು ಗ್ರಾಮ ಪಂಚಾಯಿತಿಯ ವೀರಾಪುರ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 10 ಲಕ್ಷ ರೂ.ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗುತ್ತಿದ್ದು, ಸರ್ಕಾರವು ಸಮಾಜ ಕಲ್ಯಾಣ ಇಲಾಖೆ ಮೂಲಕ ಅಂಬೇಡ್ಕರ್ ಭವನವನ್ನು ನಿರ್ಮಿಸುತ್ತಿರುವುದು ನಮ್ಮೆಲ್ಲರಿಗೂ ಸಂತಸದ ಸಂಗತಿ ಎಂದರು.
ಗ್ರಾಮದ ನಾವೆಲ್ಲರೂ ಜಾತಿ ಮತ ಧರ್ಮ ಪಕ್ಷದ ತಾರತಮ್ಯ ಇಲ್ಲದೆ ಸುಂದರ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿ ನಂತರ ಇಲ್ಲಿ ಸಣ್ಣ ಪುಟ್ಟ ಶುಭ ಸಮಾರಂಭ, ಸಭೆಗಳನ್ನು ನಡೆಸಿ ಗ್ರಾಮದ ಅಭಿವೃದ್ದಿಗೆ ಪೂರಕವಾಗಿ ಈ ಅಂಬೇಡ್ಕರ್ ಭವನವನ್ನು ಬಳಸಿಕೊಳ್ಳಬಹುದು ಎಂದರು.
ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಗ್ರಾಮದ ಮುಖಂಡರಾದ ಸಿ.ರಾಮಣ್ಣ, ರೈತ ಸಂಘದ ಮುನಿನಂಜಪ್ಪ, ಶ್ರೀನಿವಾಸ್, ಪಲ್ಲರಾಮಾಂಜಿ, ಮಣಿ, ಕೇಶವ, ಜಗನ್ನಾಥ್, ಗಂಗರಾಜ್ ಇನ್ನಿತರರು ಹಾಜರಿದ್ದರು.