Sidlaghatta : ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆಯಿಂದ ಶಿಡ್ಲಘಟ್ಟದಲ್ಲಿ ಸಾರ್ವಜನಿಕರು ಶುಕ್ರವಾರ ಬೆಳಗ್ಗಿನಿಂದಲೇ ಚಿನ್ನ ಖರೀದಿಗೆ ಮುಂದಾಗಿದ್ದರು.
ನಗರದ ಪ್ರತಿಷ್ಠಿತ ಬಂಗಾರದ ಅಂಗಡಿಗಳು ಬೆಳಗ್ಗೆ 7:30ಕ್ಕೇ ತೆರೆದು ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಈ ಶುಭ ದಿನಕ್ಕೆಂದೇ ವಿಶಿಷ್ಟ ಮತ್ತು ವಿನೂತನ ಶ್ರೇಣಿಯ ಆಭರಣ ಪ್ರದರ್ಶಿತಗೊಂಡವು. ಚಿನ್ನದ ಬೆಲೆ ಎಷ್ಟೇ ದುಬಾರಿಯಾದರೂ ಸರಿ, ಕನಿಷ್ಠ 1 ಗ್ರಾಂ. ಚಿನ್ನವನ್ನಾದರೂ ಕೊಳ್ಳಬೇಕೆಂಬ ಉದ್ದೇಶದಿಂದ ಸಾಮಾನ್ಯ ವರ್ಗದವರಿಂದ ಹಿಡಿದು ಉಳ್ಳವರು ತಮ್ಮ ಶಕ್ತ್ಯಾನುಸಾರ ಚಿನ್ನದ ಆಭರಣ, ಲಕ್ಷ್ಮಿಯ ನಾಣ್ಯ ಖರೀದಿಸಿದರು.
ಈ ಪವಿತ್ರವಾದ ದಿನದಂದು ಚಿನ್ನವನ್ನು ಖರೀದಿ ಮಾಡಿದರೆ ಸಂಪತ್ತು ಹೆಚ್ಚಾಗುತ್ತದೆ, ಸಮೃದ್ದಿಯಾಗುತ್ತದೆ, ಅದೃಷ್ಟ ನಮ್ಮದಾಗುತ್ತದೆ ಎಂಬ ನಂಬಿಕೆಯಿದೆ. ಪ್ರಮುಖವಾಗಿ ಈ ದಿನದಂದು ಜನರು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿ ಮಾಡುತ್ತಾರೆ. ಲಕ್ಷ್ಮೀ ದೇವಿ ಈ ದಿನ ನಮಗೆ ಒಳಿಯುತ್ತಾಳೆ ಎಂಬ ನಂಬಿಕೆಯೇ ಇದಕ್ಕೆ ಕಾರಣವಾಗಿದೆ. ಹಲವಾರು ವರ್ಷಗಳಿಂದ ಜನರು ಈ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದಾರೆ.