Sidlaghatta : ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಬೆಳೆಸಿಕೊಂಡು ಗುರಿ ತಲುಪಲು ಅಧ್ಯಯನಶೀಲರಾಗಬೇಕು. ವಿದ್ಯಾರ್ಥಿ ಜೀವನ ಬಂಗಾರದ ಜೀವನವಾಗಿದೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ತಿಳಿಸಿದರು.
ನಗರದ ಅಕ್ಷರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಜ್ಞಾನ ಸಂಪತ್ತಿನ ಜತೆಗೆ ಜೀವನದಲ್ಲಿ ಉತ್ತಮ ಗುರಿ ಹೊಂದಬೇಕು. ದೇಶಪ್ರೇಮ, ಸದ್ಭಾವನೆ ಬೆಳೆಸಿಕೊಳ್ಳಬೇಕು. ಕಾನೂನಿನ ಬಗ್ಗೆಯೂ ತಿಳಿದಿರಬೇಕು. ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿದು ಪಾಲಿಸಬೇಕು. ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು, ವಿದ್ಯಾರ್ಥಿ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿ, ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಳೆದ ವರ್ಷ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕೆ.ಮಾನಸ ಹಾಗೂ ಕಾಲೇಜಿನಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಾದ ಸಹನಾ, ಅಕ್ಷಯ, ನಿತ್ಯಾ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಸುಮಂತ್, ರಮೇಶ ಬಿ.ವಿ, ಕಾಲೇಜಿನ ಪ್ರಾಂಶುಪಾಲ ಬಿ.ವಿ ಪ್ರಕಾಶ್, ಉಪನ್ಯಾಸಕರಾದ ಗಜೇಂದ್ರ, ರಾಜೇಶ, ಶೃತಿ ಹಾಜರಿದ್ದರು.