Melur, Sidlaghatta : ಶಿಡ್ಲಘಟ್ಟ ನಗರದ ಪ್ರತಿಯೊಬ್ಬ ನಿವಾಸಿಗೂ ಒಳಚರಂಡಿ ಹಾಗೂ ಕುಡಿಯುವ ನೀರಿನ ಸಂಪರ್ಕವನ್ನು ಒದಗಿಸುವ ಕಾರ್ಯ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಜೊತೆಗೆ, ನಗರದ ಎಲ್ಲ ವಾರ್ಡ್‌ಗಳಲ್ಲಿ ರಸ್ತೆ ಅಭಿವೃದ್ಧಿ, ಬೀದಿ ದೀಪಗಳ ಅಳವಡಿಕೆ ಹಾಗೂ ಸ್ವಚ್ಛತೆಯನ್ನು ಕಾಪಾಡಲು ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದ್ದಾರೆ.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ನಗರದಲ್ಲಿ ಎರಡನೇ ಹಂತದ ಒಳಚರಂಡಿ ಕಾಮಗಾರಿ ಮತ್ತು ಅಮೃತ್ ಯೋಜನೆಯಡಿ ಮನೆ ಮನೆಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದರು.
ಅಲ್ಲದೆ, 10 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ನಡೆಯಲಿದ್ದು, ಏಪ್ರಿಲ್ 14 ರಂದು ಭೂಮಿ ಪೂಜೆ ನೆರವೇರಲಿದೆ. ಶಿಕ್ಷಕರ ಭವನ ಮತ್ತು ಸರ್ಕಾರಿ ನೌಕರರ ಭವನಕ್ಕೂ ಭೂಮಿ ಪೂಜೆ ಮಾಡಲಾಗುವುದು. ಈ ಮಹತ್ವದ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಹಾಗೂ ಧರ್ಮಾತೀತವಾಗಿ ಎಲ್ಲರೂ ಭಾಗವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅಮೃತ್ ಯೋಜನೆಯಡಿ 60 ಕೋಟಿ ರೂ. ವೆಚ್ಚದ ಕುಡಿಯುವ ನೀರು ಪೂರೈಕೆ ಯೋಜನೆ ಈಗ ಟೆಂಡರ್ ಹಂತದಲ್ಲಿದ್ದು, ಎರಡನೇ ಹಂತದ ಒಳಚರಂಡಿ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಈ ಯೋಜನೆಯಿಂದ ಶಿಡ್ಲಘಟ್ಟದ ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಕುಡಿಯುವ ನೀರು ಹಾಗೂ ಒಳಚರಂಡಿ ಸಂಪರ್ಕ ಸಿಗಲಿದೆ ಎಂದರು.
ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರದ ಯೋಜನೆ ಯಾವುದೆ ಕಾರಣಕ್ಕೂ ರದ್ದಾಗುವುದಿಲ್ಲ. ಆದರೆ ಕೈಗಾರಿಕೆಗಳಿಗಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನೀರಾವರಿ ಅಥವಾ ಅತ್ಯಂತ ಫಲವತ್ತಾದ ಭೂಮಿ ಇದ್ದರೆ, ರೈತರು ಮನವಿ ಮಾಡಿದರೆ, ಅದನ್ನು ಕೈಬಿಡುವಂತೆ ಸರ್ಕಾರದಲ್ಲಿ ಪ್ರಾಮಾಣಿಕವಾಗಿ ವकालತ್ತು ವಹಿಸುವೆನೆಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ತಾದೂರು ರಘು, ಕೊತ್ತನೂರು ಲಕ್ಷ್ಮೀಪತಿ, ಭಕ್ತರಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.