Belluti, sidlaghatta : “ಕೆಲವೇ ವರ್ಷಗಳ ಹಿಂದೆ ನಮ್ಮ ಬೆಳ್ಳೂಟಿ ಕೆರೆಯ (Belluti Lake) ನಟ್ಟ ನಡುವೆ ಹೋದರೂ ಕೈ ತೊಳೆಯಲೂ ನೀರು ಸಿಗುತ್ತಿರಲಿಲ್ಲ. ಇವತ್ತು 18 kg ಮೀನು (Fish) ಸಿಕ್ಕಿದೆ ಎಂದರೆ ನಮ್ಮ ಕಣ್ಣನ್ನೇ ನಾವು ನಂಬದಂತಾಗಿದ್ದೇವೆ” ಎನ್ನುತ್ತಾರೆ ಬೆಳ್ಳೂಟಿ ಗ್ರಾಮಸ್ಥರು.
ನಾಡಿನ ದೊಡ್ಡ ನದಿಗಳಲ್ಲಿ, ಮಂಗಳೂರಿನಂತಹ ಸಮುದ್ರ ತೀರಗಳಲ್ಲಿ ನೋಡಬಹುದಾಗಿದ್ದ ದೊಡ್ಡ ಗಾತ್ರದ ಮೀನುಗಳನ್ನು ಗುರುವಾರ ಮುಂಜಾನೆ ಬೆಳ್ಳೂಟಿಯ ಯುವಕರು ತಮ್ಮೂರ ಕೆರೆಯಲ್ಲಿ ಹಿಡಿದು ಸಂಭ್ರಮಿಸಿದರು.
ಒಟ್ಟು ಎಂಟು ದೊಡ್ಡ ಗಾತ್ರದ ಮೀನುಗಳು ಸಿಕ್ಕಿದ್ದು, ಅವುಗಳು 18 ಕಿಲೊ, 13 ಕಿಲೊ, 10 ಕಿಲೊ ಹಾಗೂ 8 ಕಿಲೊ ತೂಕ ಇದ್ದವು.
ಜಿಲ್ಲೆಯ ಕಂದವಾರ ಕೆರೆ, ಗೋಪಾಲಕೃಷ್ಣ ಕೆರೆ, ಮಂಚನಬೆಲೆ, ಮುಷ್ಟೂರು, ರಂಗಧಾಮನಕೆರೆ, ಜಾತವಾರ, ಕೇಶವಾರ ಕೆರೆ, ರಾಳ್ಳಕೆರೆಗಳು ತುಂಬಿ ನೀರು ಹರಿದು ಬಂದು ಬೆಳ್ಳೂಟಿ ಕೆರೆ ಸೇರುತ್ತದೆ.
“ಸುಮಾರು 35 ವರ್ಷಗಳ ಹಿಂದೆ ಇಷ್ಟು ದೊಡ್ಡ ಗಾತ್ರದ ಮೀನನ್ನು ಗ್ರಾಮದ ಹಿರಿಯರು ನಮ್ಮ ಕೆರೆಯಲ್ಲಿ ನೋಡಿದ್ದರಂತೆ. ಕಳೆದ ವರ್ಷ ಎಚ್.ಎನ್ ವ್ಯಾಲಿ ನೀರು ಹರಿಸಿದಾಗ ಕಂದವಾರದ ಕೆರೆಯಲ್ಲಿ ಒಂದು ಲಕ್ಷ ಮೀನುಗಳನ್ನು ಬಿಟ್ಟಿದ್ದರು. ಕಳೆದ ವರ್ಷ ಈ ಎಲ್ಲಾ ಸಾಲು ಸಾಲು ಕೆರೆಗಳು ತುಂಬಿ ಹರಿದಾಗ ಅವು ಕೋಡಿ ಹರಿದ ನೀರಿನೊಂದಿಗೆ ಹರಿದು ಬಂದಿವೆ. ಬೆಳ್ಳೂಟಿ ಕೆರೆಯಿಂದಲೂ ಮುಂದೆ ಹರಿದು ಅವೆಲ್ಲವೂ ಭದ್ರನಕೆರೆಗೆ ಹೋಗಿವೆ. ಈ ಬಾರಿ ಮತ್ತೆ ಸಾಲು ಸಾಲು ಕೆರೆಗಳು ಕೋಡಿ ಹರಿದಾಗ ಹೊಸ ನೀರಿನೆಡೆಗೆ ವಾಪಸ್ ಈಜಿ ಬರುತ್ತಿವೆ. ಈ ಬೃಹತ್ ಮೀನುಗಳು ನಮ್ಮ ಬಯಲು ಸೀಮೆಯಲ್ಲಿ ಕಂಡಿರುವುದೇ ದೊಡ್ಡ ಅಚ್ಚರಿ. ನಮ್ಮ ಜಲಮೂಲಗಳನ್ನು ಕಾಪಾಡಿಕೊಂಡರೆ ಇವೆಲ್ಲಾ ವಿಸ್ಮಯಗಳು ಸಾಢ್ಯವಿದೆ” ಎನ್ನುತ್ತಾರೆ ಬೆಳ್ಳೂಟಿ ಸಂತೋಷ್.