ಅಪರೂಪಕ್ಕೆ ಬರುವ ಶನಿ ಅಮಾವಾಸ್ಯೆಯಾದ ಶನಿವಾರದಂದು ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಶನಿಮಹಾತ್ಮ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಂಡಿದ್ದು ಕಷ್ಟ ನಿವಾರಣೆಗೆ ಹಾಗೂ ಶಾಂತಿಗಾಗಿ ಶನಿಮಹಾತ್ಮನನ್ನು ಪ್ರಾರ್ಥಿಸಲಾಯಿತು.
ಶನಿವಾರ ಅಮಾವಾಸೆ ಅದರಲ್ಲೂ ಅಪರೂಪಕ್ಕೆ ಬರುವ ಶನಿ ಅಮಾವಾಸ್ಯೆಯ ಜೊತೆಗೆ ಸೂರ್ಯ ಗ್ರಹಣ ಕೂಡ. ಹಾಗಾಗಿ ಶನಿಮಹಾತ್ಮನನ್ನು ಪೂಜಿಸಲು ಇದೊಂದು ವಿಶೇಷ ದಿನ ಎಂಬುದು ಭಕ್ತರಲ್ಲಿ ಮನೆಮಾಡಿರುವ ನಂಬಿಕೆ.
ಹಾಗಾಗಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಎಲ್ಲೆಲ್ಲಿ ಶನಿ ಮಹಾತ್ಮ ದೇವಾಲಯಗಳಿವೆಯೋ ಅಲ್ಲೆಲ್ಲಾ ವಿಶೇಷ ಪೂಜೆ ಪುನಸ್ಕಾರ ಹೋಮ ಶಾಂತಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ನೂರಾರು ಭಕ್ತರು ಶ್ರದ್ಧಾ ಭಕ್ತಿಯಿಂದ ದೇವಸ್ಥಾನಕ್ಕೆ ತೆರಳಿ ಭಕ್ತಿಯಿಂದ ಕೈ ಮುಗಿದು ಪೂಜಾ ಕಾರ್ಯಗಳಲ್ಲಿ ತಲ್ಲೀನರಾಗಿ ಎಲ್ಲ ಕಷ್ಟಗಳನ್ನು ಪರಿಹರಿಸಿ ಶಾಂತಿಯನ್ನು ಕರುಣಿಸೆಂದು ಆ ಭಗವಂತನಲ್ಲಿ ಪ್ರಾರ್ಥಿಸಿದರು.
ವಿಶೇಷ ಪೂಜೆ ಪುನಸ್ಕಾರ ಶಾಂತಿ ಹೋಮಗಳನ್ನು ನಡೆಸಿ ಮಹಾಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.