ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆಯ SFCS ಬ್ಯಾಂಕ್ ವ್ಯಾಪ್ತಿಯ ರೈತರಿಗೆ ಹಾಗೂ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ವಿತರಣೆ ಕಾರ‍್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಬಡ್ಡಿರಹಿತ ಸಾಲ ನೀಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಹಾಗೂ ಸ್ವಾವಲಂಬಿಗಳನ್ನಾಗಿಸುವ ಪ್ರಾಮಾಣಿಕ ಪ್ರಯತ್ನ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಬಹುತೇಕ ಕುಟುಂಬಗಳಲ್ಲಿ ಮಹಿಳೆಯರೆ ಕುಟುಂಬಗಳನ್ನು ನಿರ್ವಹಣೆ ಮಾಡುತ್ತಿದ್ದು ಅಂತಹವರಲ್ಲಿ ಅನೇಕರು ಅನಿವಾರ್ಯವಾಗಿ ಬಡ್ಡಿ ಮಾಫಿಯಾಗೆ ಸಿಲುಕಿ ತಮ್ಮ ಸಂಪಾದನೆಯ ಬಹುಪಾಲು ಹಣವನ್ನು ಬಡ್ಡಿಗಾಗಿ ಕಟ್ಟಿ ಬದುಕು ಬರ್ಬರವಾಗುತ್ತಿದೆ.
ಬಡ್ಡಿ ಮಾಫಿಯಾದಿಂದ ಹೊರ ತಂದು ಬಡ್ಡಿರಹಿತ ಸಾಲ ನೀಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಕೆಲಸ ಡಿಸಿಸಿ ಬ್ಯಾಂಕ್‌ನಿಂದ ನಡೆಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿ, ಹೆಚ್ಚು ಹೆಚ್ಚು ಎಸ್‌ಎಫ್‌ಸಿಎಸ್ ಬ್ಯಾಂಕುಗಳು ಸ್ಥಾಪನೆಯಾಗುವುದರಿಂದ ಹೆಚ್ಚು ಹೆಚ್ಚು ರೈತರಿಗೆ ಹಾಗೂ ಮಹಿಳೆಯರಿಗೆ ಸಾಲ ಹಾಗೂ ಸರ್ಕಾರದ ಸವಲತ್ತು ಸಿಗಲಿದೆ ಎಂದು ಹೇಳಿದರು.
ಎಸ್‌ಎಫ್‌ಸಿಎಸ್ ಬ್ಯಾಂಕುಗಳ ಆಡಳಿತ ಮಂಡಳಿಯೊಂದಿಗೆ ಸಿಇಒಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಆ ವ್ಯಾಪ್ತಿಯಲ್ಲಿನ ಎಲ್ಲ ಅರ್ಹ ರೈತರು, ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಸಾಲ ಸೌಲಭ್ಯ ಸಿಗಲಿದೆ ಎಂದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಈಗಾಗಲೆ 200 ಕೋಟಿ ರೂಗಳಷ್ಟು ಸಾಲವನ್ನು ರೈತರು ಹಾಗೂ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಗೆ ನೀಡಲಾಗಿದ್ದು ಯಾರೊಬ್ಬ ರೈತ, ಮಹಿಳೆಯೂ ಸಾಲ ಸೌಲಭ್ಯದಿಂದ ವಂಚಿತರಾಗಬಾರದು ಎಂಬುದು ನನ್ನ ಗುರಿ ಎಂದರು.
ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಬಡ್ಡಿರಹಿತ ಹಾಗೂ ರೈತರಿಗೆ ಕೆಸಿಸಿ ಸಾಲದ 1.21 ಕೋಟಿ ರೂ.ಗಳ ಚೆಕ್ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ಮುಖಂಡರಾದ ಗಂಜಿಗುಂಟೆ ಮೌಲ, ನರಸಿಂಹರೆಡ್ಡಿ, ರವಿ, ಕುರುಬರಹಳ್ಳಿ ಶ್ರೀನಿವಾಸರೆಡ್ಡಿ, ಎನ್.ಮುನಿಯಪ್ಪ, ಲಕ್ಕೇನಹಳ್ಳಿ ಚೌಡರೆಡ್ಡಿ, ಆನಂದ್‌ರೆಡ್ಡಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಶ್ರೀನಾಥ್, ಕಲಾವತಿ ಹಾಜರಿದ್ದರು.