ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ GKVK ವಿಶ್ವವಿದ್ಯಾಲಯದ ರೇಷ್ಮೆ ಕೃಷಿ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳೇ ರಚಿಸಿರುವ ರೇಷ್ಮೆ ಹುಳುಗಳಿಗೆ ಸೀಮೆ ಸುಣ್ಣ ಪುಡಿ ಸಿಂಪಡಿಸುವ ಯಂತ್ರದ ಪ್ರದರ್ಶನ ಹಾಗೂ ಅದರ ಕಾರ‍್ಯವಿಧಾನದ ಬಗ್ಗೆ ರೈತರಿಗೆ ವಿವರಿಸುವ ಕಾರ‍್ಯಕ್ರಮದಲ್ಲಿ ರೇಷ್ಮೆ ಇಲಾಖೆ ಉಪ ನಿರ್ದೇಶಕ ಆಂಜನೇಯಗೌಡ ಮಾತನಾಡಿದರು.
ಈ ಭಾಗದ ರೈತರು ಯಾವ ವಿಜ್ಞಾನಿಗಳಿಗಿಂತಲೂ ಕಡಿಮೆಯಿಲ್ಲ. ಕೃಷಿ, ರೇಷ್ಮೆ, ಅರಣ್ಯ, ಹೈನುಗಾರಿಕೆ ಯಾವುದೇ ಇರಲಿ ರೈತರ ಸಾಧನೆ ಇತರೆ ಭಾಗದ ರೈತರಿಗೆ ಮಾದರಿ ಹಾಗೂ ಅನುಕರಣೀಯವಾಗಿದೆ ಎಂದು ತಿಳಿಸಿದರು.
ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಉತ್ತಮ ಗುಣಮಟ್ಟದ ಮೊಟ್ಟೆ ಹುಳುಗಳು ಸಿಗುತ್ತಿದ್ದು ಕಾಣಿಸುವ ರೋಗ ನಿಯಂತ್ರಣಕ್ಕೆ ಸೂಕ್ತವಾದ ಔಷಗಳು ಲಭ್ಯವಿದೆ, ಜತೆಗೆ ಎಲ್ಲ ರೀತಿಯ ಮಾಹಿತಿ ಸಲಹೆ ಸೂಚನೆ ಮಾರ್ಗದರ್ಶನಕ್ಕೆ ನಮ್ಮ ಇಲಾಖೆಯೂ ಬದ್ಧವಾಗಿದೆ ಎಂದರು.
ರೇಷ್ಮೆ ಹುಳುಗಳಿಗೆ ಸೀಮೆ ಸುಣ್ಣದ ಪುಡಿಯನ್ನು ಸಿಂಪಡಿಸುವ ಯಂತ್ರ ಇಲ್ಲ, ಸಾಮಾನ್ಯವಾಗಿ ತೆಳುವಾದ ಬಟ್ಟೆಯಲ್ಲಿ ಇಲ್ಲವೇ ಪರದೆ ಬಟ್ಟೆಯಲ್ಲಿ ಸೀಮೆ ಸುಣ್ಣದ ಪುಡಿಯನ್ನು ಸಿಂಪಡಿಸಲಾಗುತ್ತಿದೆ, ಆದರೀಗ ಜಿಕೆವಿಕೆ ವಿದ್ಯಾರ್ಥಿಗಳು ಅಂತಹ ಒಂದು ಬ್ಯಾಟರಿ ಚಾಲಿತ ಸಣ್ಣ ಯಂತ್ರವನ್ನು ಆವಿಷ್ಕರಿಸಿದ್ದು ಅದರಲ್ಲಿ ಸಣ್ಣ ಪುಟ್ಟ ಮಾರ್ಪಾಟುಗಳನ್ನು ಮಾಡಿಕೊಂಡರೆ ಅನುಕೂಲಕರವಾಗಲಿದೆ ಎಂದು ಹೇಳಿದರು.
ಇದುವರೆಗೂ ಯೂರಿಯಾವನ್ನು ಘನರೂಪದ ಕರಗುವ ಪದಾರ್ಥದ ರೂಪದಲ್ಲಿ ಬಳಸುತ್ತಿದ್ದು, ಇದೀಗ ದ್ರವ ರೂಪದಲ್ಲಿ ಯೂರಿಯಾವನ್ನು ಆವಿಷ್ಕರಿಸಲಾಗಿದೆ. ಕೇಂದ್ರ ಸರ್ಕಾರದ ಇಫ್ಕೋ ಇದನ್ನು ಆವಿಷ್ಕರಿಸಿದ್ದು ಇನ್ನೂ ಮಾರುಕಟ್ಟೆ ಬಿಟ್ಟಿಲ್ಲ.
ಟ್ರೈಯಲ್ ಬಳಕೆಗೆ ಬಿಟ್ಟಿದ್ದು ಉತ್ತಮ ಫಲಿತಾಂಶವನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಶೀಘ್ರದಲ್ಲೆ ಬಿಡಲಾಗುವುದು ಎಂದು ವಿವರಿಸಿದರು.
ಆಹಾರ ತಜ್ಞೆ ಶಂಶದ್‌ಬೇಗ್ ಮಾತನಾಡಿ, ನಾವಾಗಲಿ ಇಲ್ಲವೇ ರಾಸುಗಳಾಗಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರವನ್ನು ಸೇವಿಸಬೇಕು. ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿ ಇಡಲಿದೆ ಎಂದರು. ಏಕದಳ, ದ್ವಿದಳ, ಎಣ್ಣೆ ಕಾಳುಗಳು ಹಾಗೂ ಕೊಬ್ಬಿನ ಪದಾರ್ಥಗಳು ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರುತ್ತವೆ, ಅವುಗಳನ್ನು ಬಳಸುವ ರೀತಿ ಹೇಗೆ ಎಂಬುದರ ಬಗ್ಗೆ ವಿವರಣೆ ನೀಡಿದರು.
ಆಕಾಶ್ ಸನ್ನಿಂಗಣ್ಣ ಹಾಗೂ ಸ್ನೇಹಿತರು ಸ್ಥಳೀಯವಾಗಿ ಲಭ್ಯವಿದ್ದ ವಸ್ತುಗಳನ್ನು ಬಳಸಿ ತಯಾರಿಸಿದ ಸುಣ್ಣದ ಪುಡಿಯನ್ನು ಸಿಂಪಡಿಸುವ ಯಂತ್ರದ ಪ್ರಾತ್ಯಕ್ಷಿತೆಯನ್ನು ಪ್ರದರ್ಶಿಸಿದರು.
GKVK ಡಾ.ವೈ.ಎನ್.ಶಿವಲಿಂಗಯ್ಯ, ರೇಷ್ಮೆ ಕೃಷಿ ಸಹಾಯಕ ನಿರ್ದೆಶಕ ಕೆ.ತಿಮ್ಮರಾಜು, ಕೃಷಿ ಇಲಾಖೆಯ ಆತ್ಮ ವಿಭಾಗದ ಅಶ್ವತ್ಥನಾರಾಯಣ್, ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಸಿಇಒ ಜನಾರ್ಧನ್‌ಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯ ವಿಶ್ವಾಸ್, ಪ್ರಗತಿಪರ ದ್ವಿತಳಿ ರೇಷ್ಮೆಗೂಡು ಬೆಳೆಗಾರ ನಾಗೇಶ್ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi