Cheemangala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯಿತಿಯಲ್ಲಿ ಈಚೆಗೆ ಅಂತಾರಾಷ್ಟ್ರೀಯ ಹಿರಿಯರ ದಿನ ಹಾಗು ಸ್ವಚ್ಛತೆ ಅಭಿಯಾನವನ್ನು ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನೂರು ವರ್ಷ ಪೂರೈಸಿದ ಚೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಲ್ಲಪ್ಪನಹಳ್ಳಿ ಗ್ರಾಮದ ಹಿರಿಯ ನಾಗರಿಕ ಮುನಿಯಪ್ಪ ಅವರಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದ ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ ಮಾತನಾಡಿ, “ಹಿರಿಯ ನಾಗರಿಕರು ಕಚೇರಿಗೆ ಭೇಟಿ ನೀಡಿದಾಗ ಅವರನ್ನು ಗೌರವದಿಂದ ನೋಡಿಕೊಳ್ಳಬೇಕು. ಸರ್ಕಾರದ ವತಿಯಿಂದ ಹಿರಿಯ ನಾಗರಿಕರ ವೃದ್ಯಾಪ್ಯ ವೇತನ ನೀಡಲಾಗುತ್ತಿದೆ, ಯಾರಿಗೆ ವೃದ್ಯಾಪ್ಯ ವೇತನ ಸಿಗುತ್ತಿಲ್ಲ ಅಂತವರಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಡಿಸಿಕೊಡಬೇಕು” ಎಂದರು.
“ಹಿರಿಯರ ಅನುಭವ ಹಾಗೂ ಅವರ ಮಾರ್ಗದರ್ಶನವನ್ನು ಇಂದಿನ ಯುವ ಪೀಳಿಗೆ ಸದ್ಬಳಕೆ ಮಾಡಿಕೊಂಡು ಅವರ ಸಲಹೆ ಸೂಚನೆಯಂತೆ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಅವರು ಜೀವನದಲ್ಲಿ ಅಳವಡಿಸಿಕೊಂಡ ಮೌಲ್ಯಗಳು, ಸಂಸ್ಕಾರ ಹಾಗೂ ಅವರ ಜೀವನದ ಅನುಭವಗಳು ಎಲ್ಲರಿಗೂ ದಾರಿದೀಪವಾಗಬೇಕು. ಹಿಂದಿನ ಕಾಲದಲ್ಲಿ ವೃದ್ಧಾಪ್ಯ ಒಂದು ಸಮಸ್ಯೆ ಆಗಿರಲಿಲ್ಲ. ಆದರೆ ಇಂದು ಸಮಾಜದಲ್ಲಿ ಬಂದಿರುವ ಬದಲಾವಣೆಗಳಿಂದಾಗಿ ಅವರು ತೊಂದರೆಗೆ ಒಳಗಾಗಿದ್ದಾರೆ. ವೃದ್ಧರ ಬಗ್ಗೆ ಪ್ರೀತಿ, ಅನುಕಂಪ, ಸಹಾನುಭೂತಿಯಂತಹ ಮಾನವೀಯ ಮೌಲ್ಯಗಳು, ಭಾವನೆಗಳು ಕಂಡುಬರುತ್ತಿಲ್ಲ” ಎಂದು ವಿಷಾದಿಸಿದರು.
ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು. ಚೀಮಂಗಲ ಕುವೆಂಪು ಮಾದರಿ ಸರ್ಕಾರಿ ಶಾಲೆಯ ಪಕ್ಕದ ರಸ್ತೆ ಬದಿಯ ತ್ಯಾಜ್ಯ, ಕಳೆ ಗಿಡಗಳು ಹಾಗೂ ಮುಳ್ಳುಗಿಡಗಳನ್ನೆಲ್ಲಾ ಸ್ವಚ್ಛಗೊಳಿಸಲಾಯಿತು.
ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ, ಪಿಡಿಒ ತನ್ವೀರ್ ಅಹಮದ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಡಿ.ಎಂ.ಸರಸ್ವತಿ, ಉಪಾಧ್ಯಕ್ಷೆ ಎನ್.ಅಮೃತ, ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.