Sidlaghatta : 1950 ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳನ್ನು ಒಟ್ಟುಗೂಡಿಸಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಎಂದು ಸ್ಥಾಪಿಸಿದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 7 ರಂದು ಧ್ವಜ ದಿನಾಚರಣೆ ಮತ್ತು ಸಂಸ್ಥಾಪನಾ ದಿನಾಚರಣೆ ಯನ್ನಾಗಿ ರಾಷ್ಟ್ರಾದ್ಯಂತ ಆಚರಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ತಿಳಿಸಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾಪನಾ ದಿನ ಮತ್ತು ಧ್ವಜ ದಿನಾಚರಣೆ ಅಂಗವಾಗಿ ಧ್ವಜ ಚೀಟಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಭಾರತದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯು 1909 ರಲ್ಲಿ ಪ್ರಾರಂಭವಾಗಿದ್ದು ಅಂದಿನಿಂದ ಸ್ಕೌಟ್ಸ್ ಸಂಸ್ಥೆ ಮತ್ತು ಗೈಡ್ ಸಂಸ್ಥೆ ಹಾಗೂ ಇತರೆ ಹೆಸರುಗಳಲ್ಲಿ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ದೇಶ
ಸ್ವಾತಂತ್ರಗೊಂಡ ನಂತರ 1950 ನವಂಬರ್ 7 ರಂದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಎಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳನ್ನು ಒಟ್ಟುಗೂಡಿಸಿ “ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್” ಎಂಬ ಹೆಸರಿನಲ್ಲಿ ಸ್ಥಾಪಿಸಲಾಯಿತು ಎಂದರು.
ಜಿಲ್ಲಾ ಕಾರ್ಯದರ್ಶಿ ಸಿ.ಬಿ.ಪ್ರಕಾಶ್ ಮಾತನಾಡಿ, ಧ್ವಜ ದಿನಾಚರಣೆ ಅಥವಾ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಎಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಶಾಲೆಗಳಲ್ಲಿ ಧ್ವಜ ಚೀಟಿಗಳನ್ನು ಬಿಡುಗಡೆಗೊಳಿಸುವ ಮೂಲಕ ಇಂದಿನಿಂದ ನವೆಂಬರ್ 14 ರವರೆಗೆ ಏಳು ದಿನಗಳ ಕಾಲ ಸ್ಕೌಟ್ ಗೈಡ್ ಸಪ್ತಾಹ ಎಂಬ ಹೆಸರಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ಹಾಗೂ ರ್ಯಾಲಿಗಳ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಯ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಭಾಸ್ಕರ್‌ಗೌಡ ಹಾಜರಿದ್ದರು.