Sidlaghatta : ದೇಶದಲ್ಲಿಯೇ ಇದೇ ಮೊಟ್ಟ ಮೊದಲ ಭಾರಿಗೆ ದಕ್ಷಿಣ ಕನ್ನಡದ ಮೂಡಬಿದರೆಯ ಆಳ್ವಾಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಏಳು ದಿನಗಳ ಕಾಲ ನಡೆಯುತ್ತಿರುವ ಅಂತರರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ೨೦೨೨ ರಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ತಾಲೂಕಿನ ಹಿರಿಮೆಯನ್ನು ದೇಶಕ್ಕೆ ಪರಿಚಯ ಮಾಡಿಕೊಡಬೇಕು ಎಂದು ಸಿಟಿಜನ್ ಶಾಲೆಯ ಪ್ರಾಂಶುಪಾಲ ಎನ್.ಶಿವಣ್ಣ ಹೇಳಿದರು.
ಶಿಡ್ಲಘಟ್ಟ ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ 2022 ರಲ್ಲಿ ಭಾಗವಹಿಸಲು ಹೊರಟ ಸುಮಾರು ೧೧೯ ವಿದ್ಯಾರ್ಥಿಗಳಿಗೆ ಶುಭಹಾರೈಸಿ ಮಾತನಾಡಿದರು.
ಡಿ 21 ರಿಂದ ಡಿ 27 ರವರೆಗೂ ಮೂಡಬಿದರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಜಾಂಬೂರಿ ೨೦೨೨ ರಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಸ ಕ್ರೀಡೆಗಳು, ವಿದ್ಯಾರ್ಥಿಗಳ ಪ್ರತಿಭಾ ಕೌಶಲ್ಯಗಳ ಪ್ರದರ್ಶನ ಮತ್ತಿತರ ಚಟುವಟಿಕೆಗಳು ನಡೆಯಲಿದ್ದು ವಿದ್ಯಾರ್ಥಿಗಳು ಎಲ್ಲದರಲ್ಲಿಯೂ ಭಾಗವಹಿಸುವ ಜೊತೆಗೆ ತಾಲೂಕಿನ ಹಿರಿಮೆಯನ್ನು ಜಗತ್ತಿಗೆ ಪರಿಚಯ ಮಾಡಿಕೊಡಬೇಕು ಎಂದರು.
ಶ್ರೀ ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಶ್ರೀಕಾಂತ್ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಇದೊಂದು ಅತ್ಯುತ್ತಮ ಅವಕಾಶವಾಗಿದ್ದು ಅಂತರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಜಂಬೂರಿಯಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಜಾಂಬೂರಿಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಮತ್ತು ಶಿಕ್ಷಕರಿಗೂ ಶುಭವಾಗಲಿ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಸಿ.ಬಿ.ಪ್ರಕಾಶ್, ಶಿಡ್ಲಘಟ್ಟ ತಾಲೂಕು ಕಾರ್ಯದರ್ಶಿ ಮುನಿರಾಜು, ಸಹಕಾರ್ಯದರ್ಶಿ ನಾಗರಾಜು, ಶಿಕ್ಷಕರಾದ ಉಷಾ.ಬಿ.ಪ್ರಕಾಶ್, ಶಿವಲೀಲಾ ಮತ್ತಿತರರು ಹಾಜರಿದ್ದರು.