Sidlaghatta : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿಡ್ಲಘಟ್ಟ ಸ್ಥಳೀಯ ಸಂಸ್ಥೆ ವತಿಯಿಂದ ವಾರ್ಷಿಕ ಮಹಾಸಭೆ ಮತ್ತು ತಾಲ್ಲೂಕು ಮಟ್ಟದ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆಯನ್ನು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಹಾಗೂ ತಾಲ್ಲೂಕು ದಂಡಾಧಿಕಾರಿ ಬಿ.ಎನ್.ಸ್ವಾಮಿ, ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯು ಭಾರತ ದೇಶದ ಭವಿಷ್ಯಕ್ಕಾಗಿ ಉತ್ತಮ ಪ್ರಜೆಗಳನ್ನು ರೂಪಿಸುವ ಸಂಸ್ಥೆಯಾಗಿದೆ. ಶಾಲೆಯ ಉಳಿದ ವಿದ್ಯಾರ್ಥಿಗಳಿಗಿಂತ ಸ್ಕೌಟ್ಸ್ ಮತ್ತು ಗೈಡ್ಸ್ ಸಮವಸ್ತ್ರವನ್ನು ಧರಿಸಿ ಬರುವ ವಿದ್ಯಾರ್ಥಿಗಳು ವಿಶೇಷ ಹಾಗೂ ವಿಭಿನ್ನವಾಗಿರುತ್ತಾರೆ. ಶಿಸ್ತು ಮತ್ತು ಸೇವೆಗೆ ಹೆಸರಾಗಿರುತ್ತಾರೆ. ಈ ಸಂಸ್ಥೆಯಿಂದ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದ್ದು ಇನ್ನಷ್ಟು ಪರಿಣಾಮಕಾರಿಯಾಗಿ ಸಂಸ್ಥೆಯ ಚಟುವಟಿಕೆಗಳನ್ನು ವಿಸ್ತರಿಸಲು ತಾಲ್ಲೂಕು ಆಡಳಿತ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಸಂಸ್ಥೆಯ ತಾಲ್ಲೂಕು ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ಮಾತನಾಡಿ, ತಾಲ್ಲೂಕಿನ ಕೆಲವಾರು ಕಾರ್ಯಕ್ರಮಗಳಲ್ಲಿ ಹಾಗೂ ಜಿಲ್ಲಾಮಟ್ಟ ಮತ್ತು ರಾಜ್ಯಮಟ್ಟದ ಚಟುವಟಿಕೆಗಳಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು. ಎಲ್ಲಾ ಶಾಲೆಗಳಲ್ಲಿಯೂ ಕಡ್ಡಾಯವಾಗಿ ಸ್ಕೌಟ್ ಮತ್ತು ಗೈಡ್ಸ್ ಘಟಕಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳನ್ನು ಕಲಿಸಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು.
ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಸಿ. ಬಿ. ಪ್ರಕಾಶ್ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ಸ್ಥಳೀಯ ಸಂಸ್ಥೆಯು ಜಿಲ್ಲೆಯ ಇತರ ಎಲ್ಲ ತಾಲ್ಲೂಕುಗಳಿಗಿಂತ ಸ್ಕೌಟ್ಸ್ ಮತ್ತು ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ. ಕಳೆದ ಬಾರಿ ತಾಲೂಕಿನ 16 ವಿದ್ಯಾರ್ಥಿಗಳಿಗೆ ಗೌರವಾನ್ವಿತ ರಾಜ್ಯಪಾಲರಿಂದ ರಾಜ್ಯಪಾಲರ ಪ್ರಶಸ್ತಿ ಸಿಕ್ಕಿರುವುದು ತಾಲ್ಲೂಕಿನ ಹೆಮ್ಮೆ ಎಂದು ತಿಳಿಸಿದರು.
ಸಭೆ ನಂತರ ತಾಲ್ಲೂಕು ಮಟ್ಟದ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ತಾಲ್ಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಕೌಟ್ಸ್ ವಿಭಾಗದಲ್ಲಿ ಸರಸ್ವತಿ ಶಾಲೆ, ವಿದ್ಯಾರ್ಥಿಗಳು ಗೈಡ್ಸ್ ವಿಭಾಗದಲ್ಲಿ ಬಿಜಿಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ಹಾಗೂ ಬುಲ್ ಬುಲ್ ವಿಭಾಗದಲ್ಲಿ ಬಿಜಿಎಸ್ ಪಬ್ಲಿಕ್ ಶಾಲೆ, ವಿದ್ಯಾರ್ಥಿನಿಯರು ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.
ಏಪ್ರಿಲ್ ಮೇ ತಿಂಗಳಲ್ಲಿ ಬೇಸಿಗೆ ಶಿಬಿರ ನಡೆಸಿದ ಶಾಲೆಗಳಿಗೆ ಪ್ರಮಾಣ ಪತ್ರ ಮತ್ತು ಸ್ಕಾರ್ಫ್ ಓಗಲ್ ಗಳನ್ನು ವಿತರಿಸಲಾಯಿತು. ಆಯ್ಧ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ವಿವಿಧ ಶಾಲೆಗಳ ಶಿಕ್ಷಕ ಶಿಕ್ಷಕಿಯರು ಹಾಗೂ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.