Kachahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಾಚಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಗ್ರಾಮದಲ್ಲಿರುವ ರಾಗಿ ಒಕ್ಕಣೆ ಮಾಡುತ್ತಿದ್ದ ರೋಣಕಲ್ಲು, ಡೋರೆ ಹುಣಸೆ ಹಣ್ಣು, ಸೌರವಿದ್ಯುತ್, ಎರೆಗೊಬ್ಬರ, ರಾಗಿ ತೂರುವುದು ಮುಂತಾದವುಗಳನ್ನು ಗುರುವಾರ ಪರಿಚಯಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಶಿಕ್ಷಕ ವಿ.ಚಂದ್ರಶೇಖರ್, “ಮಕ್ಕಳಿಗೆ ಪರಿಸರ ಅಧ್ಯಯನ ವಿಷಯದಲ್ಲಿ ಬರುವ ವಿವಿಧ ರೀತಿಯ ಶಕ್ತಿಗಳಾದ ಪ್ರಚ್ಛನ್ನ ಶಕ್ತಿ, ಸೌರ ಶಕ್ತಿ, ಗಾಳಿ ಶಕ್ತಿ, ಗುರುತ್ವಾಕರ್ಷಣ ಶಕ್ತಿ, ಜೈವಿಕ ಶಕ್ತಿಗಳನ್ನು ಗ್ರಾಮದಲ್ಲಿ ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು. ಜೊತೆಗೆ ಹಿಂದೆ ರಾಗಿ ಒಕ್ಕಣೆ ಮಾಡುತ್ತಿದ್ದ ಗುಂಡನೆಯ ರೋಣ ಕಲ್ಲು ಪರಿಚಯಿಸಲಾಯಿತು.
ಐದನೇ ತರಗತಿಯ ಕನ್ನಡ ಪಠ್ಯದ ನಾನು ಮತ್ತು ಹುಂಚಿಮರ ಎಂಬ ಪಾಠದಲ್ಲಿ ಬರುವ ಡೋರೆ ಹುಣಸೆ ಹಣ್ಣಿನ ಪರಿಚಯವನ್ನು ಮಕ್ಕಳಿಗೆ ಮಾಡಿಕೊಟ್ಟೆವು. ಡೋರೆ ಹುಣಸೆ ಎಂದರೆ ಅತ್ತ ಸಿಹಿಯು ಅಲ್ಲದ ಹುಳಿಯೂ ಅಲ್ಲದ ಮಧ್ಯದ ಸ್ಥಿತಿಯಾಗಿದ್ದು ಆಪೂಸ್ ಮಾವಿನ ಹಣ್ಣಿನ ರುಚಿ ಗಿಂತ ಮಿಗಿಲಾದ ಅದ್ಭುತ ರುಚಿಯನ್ನು ಹೊಂದಿರುತ್ತದೆ. ಇದನ್ನು ಪಾಠದಲ್ಲಿ ಮಾತ್ರ ಕೇಳಿದ್ದ ಮಕ್ಕಳು ತಾವೇ ಸವಿದು ರುಚಿಯನ್ನು ಅನುಭವಿಸಿ ಆನಂದಿಸಿದರು” ಎಂದು ವಿವರಿಸಿದರು.
ಮುಖ್ಯ ಶಿಕ್ಷಕಿ ಆರ್. ರಾಜೇಶ್ವರಿ ಹಾಗೂ ಸಹ ಶಿಕ್ಷಕ ಚಂದ್ರಶೇಖರ್ ವಿ ಮಕ್ಕಳ ಜೊತೆಗಿದ್ದರು.