ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಾವಿತ್ರಿ ಬಾಪುಲೆಯವರ ಜನ್ಮದಿನಾಚರಣೆ, ಕ್ಲಸ್ಟರ್ ಹಂತದ ಮುಖ್ಯಶಿಕ್ಷಕರ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕಿ ರಾಜೇಶ್ವರಿ ಉಜ್ರೇಕರ ಮಾತನಾಡಿದರು.
ಮನುವಾದಿಗಳ ವಿರೋಧದ ನಡುವೆಯೂ ರಾಷ್ಟ್ರದಲ್ಲಿ ಮೊಟ್ಟ ಮೊದಲು ಪ್ರತ್ಯೇಕ ಹೆಣ್ಣುಮಕ್ಕಳ ಶಾಲೆ ಆರಂಭಿಸಿ ಅಕ್ಷರದಾನ ಮಾಡುವ ಮೂಲಕ ಸಾವಿತ್ರಿ ಬಾಪುಲೆ ನೈಜ ಅಕ್ಷರಮಾತೆಯಾಗಿದ್ದಾರೆ ಎಂದು ಅವರು ತಿಳಿಸಿದರು.
ಶಿಡ್ಲಘಟ್ಟ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ದೇಶದ ಅಬಿವೃದ್ಧಿಯಲ್ಲಿ ಸ್ತ್ರೀಯರಿಗೆ ಶಿಕ್ಷಣ ಅಗತ್ಯವೆಂಬುದನ್ನು ಮೊದಲಿಗೆ ಕಂಡುಕೊಂಡವರು. ಬಾಪುಲೆ ಅವರ ಶ್ರಮವು ಇಂದಿನ ಮಹಿಳಾ ಶೈಕ್ಷಣಿಕ ಪ್ರಗತಿಗೆ ಕಾರಣವಾಗಿದೆ. ಬಾಪುಲೆ ಭಾರತದ ಪ್ರಥಮ ಶಿಕ್ಷಕಿ, ವಿಶ್ವದ ಮಾತೆಯಾಗಿದ್ದಾರೆ. ಮಹಿಳಾ ಉದ್ಧಾರದಲ್ಲಿ ಬಾಪುಲೆ ಕೊಡುಗೆಯಿದೆ ಎಂದರು.
ಸಂಪನ್ಮೂಲ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಸರ್ಕಾರಿ ಶಾಲೆಗಳ ಸರ್ವತೋಮುಖ ಪ್ರಗತಿ, ಗುಣಾತ್ಮಕ ಶಿಕ್ಷಣದ ಉದ್ದೇಶ ಸಾಧನೆಯಲ್ಲಿ ಸಮುದಾಯದ ಸಹಭಾಗಿತ್ವದ ಅಗತ್ಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅಂಶಗಳ ಅರಿವು ಸಮುದಾಯಕ್ಕೆ ಆಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಿಆರ್‌ಪಿ ಎಂ.ರಮೇಶ್‌ಕುಮಾರ್, ಮುಖ್ಯಶಿಕ್ಷಕಿ ನೇತ್ರಾವತಿ, ಶಿಕ್ಷಕಿಯರಾದ ವಾಣಿಶ್ರೀ, ಪಿ.ಗೀತಾ, ಉಮಾದೇವಿ, ಕ್ಲಸ್ಟರ್‌ನ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರು ಉಪಸ್ಥಿತರಿದ್ದರು.