News

ಅನ್ಯಾಯ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದ ಸಂತೋಷ್ ಹೆಗ್ಡೆ; ರಕ್ತದಾನ ಶಿಬಿರದಲ್ಲಿ 64 ಯೂನಿಟ್ ಸಂಗ್ರಹ

Sidlaghatta Justice Santosh Hegde inaugurates free heart checkup and blood donation camp

Sidlaghatta : ಸಾರ್ವಜನಿಕ ಹಿತಾಸಕ್ತಿ ಹಾಗೂ ಮಾನವೀಯ ಕರ್ತವ್ಯದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ಮತ್ತು ಸಾಮಾಜಿಕ ತಪ್ಪುಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನೀಲಾ ಜನಸೇವಾ ಫೌಂಡೇಶನ್, ನೀಲಾ ಯುವ ಬ್ರಿಗೇಡ್ ಹಾಗೂ ಆರೋಗ್ಯ ಇಲಾಖೆ, ನಾರಾಯಣ ಹೃದಯಾಲಯ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಹೃದಯ ಆರೋಗ್ಯ ತಪಾಸಣಾ ಹಾಗೂ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಅಧಿಕಾರ ಮತ್ತು ಶ್ರೀಮಂತಿಕೆಗೆ ಸಮಾಜದಲ್ಲಿ ಹೆಚ್ಚಿನ ಪ್ರಾಧಾನ್ಯ ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಹೇಗಾದರೂ ಮಾಡಿ ಶ್ರೀಮಂತರಾಗಬೇಕು ಎಂಬ ಮನೋಭಾವ ಹೆಚ್ಚುತ್ತಿದೆ. ಆದರೆ ಸಂಪತ್ತು ಗಳಿಸುವ ಸಂದರ್ಭದಲ್ಲಿ ಅದರಿಂದ ಬೇರೆಯವರ ಬದುಕಿನ ಮೇಲೆ ಆಗುವ ಪರಿಣಾಮವನ್ನೂ ಯೋಚಿಸಬೇಕು. ಅಧಿಕಾರದ ವ್ಯಾಮೋಹದಲ್ಲಿ ಮಾನವೀಯ ಮೌಲ್ಯಗಳನ್ನು ಮರೆಯಬಾರದು ಎಂದು ಸಲಹೆ ನೀಡಿದರು.

ಭಾರತ ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿದೆ ಎಂಬ ಹೆಮ್ಮೆಯೊಂದಿಗೆ, ಆ ಪ್ರಗತಿಯ ನೇರ ಪ್ರಯೋಜನ ಸಾಮಾನ್ಯ ಜನರ ಬದುಕಿಗೆ ಎಷ್ಟರ ಮಟ್ಟಿಗೆ ತಲುಪುತ್ತಿದೆ ಎಂಬುದನ್ನೂ ಪರಿಶೀಲಿಸಬೇಕು. ದೇಶದ ಆರ್ಥಿಕ ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿದಾಗ ಮಾತ್ರ ಅಭಿವೃದ್ಧಿಗೆ ಅರ್ಥ ಬರುತ್ತದೆ ಎಂದರು.

ಭ್ರಷ್ಟಾಚಾರದಿಂದ ಆಡಳಿತ ವ್ಯವಸ್ಥೆಯ ಮೇಲಿನ ಜನರ ನಂಬಿಕೆಗೆ ಧಕ್ಕೆಯಾಗುತ್ತದೆ. ಹಿಂದೆ ಸರ್ಕಾರದಿಂದ ಬಿಡುಗಡೆಯಾಗುವ ಒಂದು ರೂಪಾಯಿಯಲ್ಲಿ ಕೊನೆಯ ಹಂತದ ಫಲಾನುಭವಿಗೆ ಅಲ್ಪ ಪ್ರಮಾಣದ ಹಣ ಮಾತ್ರ ತಲುಪುತ್ತಿತ್ತು ಎಂಬುದನ್ನು ರಾಜೀವ್ ಗಾಂಧಿ ಅವರು ಹೇಳಿದ್ದನ್ನು ಉಲ್ಲೇಖಿಸಿದ ಸಂತೋಷ್ ಹೆಗ್ಡೆ, ಆಡಳಿತ ವ್ಯವಸ್ಥೆಯ ಮೂಲಕ ಜನರಿಗೆ ನ್ಯಾಯ ಮತ್ತು ಸೌಲಭ್ಯಗಳು ಪರಿಣಾಮಕಾರಿಯಾಗಿ ತಲುಪುವಂತಾಗಬೇಕು ಎಂದರು.

ಮೌಲ್ಯ ಶಿಕ್ಷಣದ ಅಗತ್ಯ ಏಕೆ?

ಇಂದಿನ ಸಮಾಜದಲ್ಲಿ ಮೌಲ್ಯ ಶಿಕ್ಷಣದ ಕೊರತೆ ಪ್ರಮುಖ ಸಮಸ್ಯೆಯಾಗಿದೆ. ಮಕ್ಕಳಿಗೆ ಮಾನವೀಯತೆ, ಪ್ರಾಮಾಣಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಮೇಲಿದೆ. ಶಾಲೆಗಳಲ್ಲಿ ನೈತಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮನೆ ಮಕ್ಕಳ ಮೊದಲ ಶಾಲೆಯಾಗಿದ್ದು, ಪೋಷಕರು ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವದ ಆಶಯಗಳು ಬಲಗೊಳ್ಳಲು ಜನರ ಮನೋಭಾವದಲ್ಲಿಯೂ ಬದಲಾವಣೆ ಅಗತ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದರೂ ರಾಜಪ್ರಭುತ್ವದ ಮನೋಭಾವ ಬೆಳೆಸಿಕೊಳ್ಳುವುದು ಸರಿಯಲ್ಲ. ಅಧಿಕಾರವು ಜನರ ಸೇವೆಗಾಗಿ ಎಂಬ ಅರಿವು ಅಧಿಕಾರದಲ್ಲಿರುವವರಿಗೂ ಸಾರ್ವಜನಿಕರಿಗೂ ಇರಬೇಕು ಎಂದರು.

ಮಾನವೀಯತೆ ಮತ್ತು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಶಿಬಿರದಲ್ಲಿ ಎಷ್ಟು ರಕ್ತ ಸಂಗ್ರಹವಾಯಿತು?

ಶಿಬಿರದಲ್ಲಿ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಾಗೂ ಹೃದಯಕ್ಕೆ ಸಂಬಂಧಿಸಿದ ಪ್ರಾಥಮಿಕ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು. ಬೃಹತ್ ರಕ್ತದಾನ ಶಿಬಿರದಲ್ಲೂ ಯುವಕರು ಸೇರಿದಂತೆ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು 64 ಯೂನಿಟ್ ರಕ್ತದಾನ ಮಾಡಿದರು.

ತಹಶೀಲ್ದಾರ್ ಗಗನ ಸಿಂಧು, ಕಾರ್ಯನಿರ್ವಹಣಾಧಿಕಾರಿ ಆರ್. ಹೇಮಾವತಿ, ಹೈಕೋರ್ಟ್ ವಕೀಲ ರವಿಶಂಕರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಜಯರಾಮ್, ನೀಲಾ ಯುವ ಬ್ರಿಗೇಡ್ ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ಲೋಕೇಶ್ ಎಂ., ಅಗ್ರಹಾರ ಶಿವರಾಜ್, ಪೊಲೀಸ್ ಇಲಾಖೆಯ ಸುರೇಶ್, ಶಾಲಾ ಪ್ರಾಂಶುಪಾಲೆ ಇಶ್ರತ್, ಡಾ. ಸತ್ಯನಾರಾಯಣರಾವ್, ವಿದ್ಯಾ ವಸ್ತ್ರದ್, ಕ್ರೆಸೆಂಟ್ ಶಾಲೆಯ ತಮೀಮ್ ಅನ್ಸಾರಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ರಕ್ತದಾನಿಗಳು ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Sidlaghatta First Grade College Blood Donation Camp

News

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

Sidlaghatta, Chikkaballapur : ಶಿಡ್ಲಘಟ್ಟ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Share
error: Content is protected !!