Hujagur, Sidlaghatta : ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕ್ರಿಯಾಶೀಲತೆ ಹೊರಹೊಮ್ಮಲು “ಕಾಗದ ಕತ್ತರಿ ಕಲೆ” ಅತ್ಯುತ್ತಮ ಮಾಧ್ಯಮ. ಇದರಿಂದ ಕಲೆಯ ಬಗ್ಗೆ ಆಸಕ್ತಿ ಮೂಡುವುದಲ್ಲದೆ, ಏಕಾಗ್ರತೆ ಮತ್ತು ಸ್ಮರಣಶಕ್ತಿ ವೃದ್ಧಿಸುತ್ತದೆ ಎಂದು ಕಲಾವಿದ ಎಸ್.ಎಫ್.ಹುಸೇನಿ ತಿಳಿಸಿದರು.
ತಾಲ್ಲೂಕಿನ ಹುಜುಗೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲೆಯ ವಿದ್ಯಾರ್ಥಿಗಳಿಗೆ ಕಾಗದ ಕತ್ತರಿಸುವ ವಿಶಿಷ್ಟ ದೇಸಿ ಕಲೆ “ಸಾಂಜಿ” ಕಲೆಯ ಬಗ್ಗೆ ಮಕ್ಕಳಿಗೆ ವಿವರಿಸಿ, ಮಕ್ಕಳಿಗೆ ಹಲವು ಬಗೆಯ “ಕಾಗದ ಕತ್ತರಿ ಕಲೆ” (ಪೇಪರ್ ಆರ್ಟ್ ಮತ್ತು ಪೇಪರ್ ಕ್ರಾಫ್ಟ್) ಕಲಿಸಿ ಅವರು ಮಾತನಾಡಿದರು.
ಕಾಗದ ಕತ್ತರಿ ಕಲೆಯಿಂದ ತಾಳ್ಮೆ, ಒತ್ತಡ ನಿವಾರಣೆಗೂ ಸಹಕಾರಿಯಾಗುತ್ತದೆ. ಅತಿ ಹೆಚ್ಚು ಬಳಕೆಯಾಗುವ ಬೆರಳ ತುದಿ ಮಿದುಳನ್ನು ಚುರುಕಾಗಿಸುತ್ತದೆ. ಜ್ಯಾಮಿತಿಯ ವಿವಿಧ ಆಕಾರಗಳ ಪರಿಚಯವಾಗುವುದರಿಂದ ಚೌಕಾಕಾರ, ತ್ರಿಕೋನ, ಆಯತಾಕಾರ ಮುಂತಾದವುಗಳ ಬಗ್ಗೆ ಅರಿವು ಮೂಡುತ್ತದೆ. ಈ ಕಲೆಯು ಪಠ್ಯದಿಂದ ಪಠೇತರ ವಿಷಯಕ್ಕೆ ವಿಜ್ಞಾನ, ಗಣಿತದ ಮಾದರಿ ತಯಾರಿಸಲು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಲು ಉಪಯುಕ್ತವಾಗಿದೆ ಎಂದರು.
ಶಿಕ್ಷಕ ಎಂ.ಜೆ.ರಾಜೀವಗೌಡ ಮಾತನಾಡಿ, ಕಾಗದ ಕತ್ತರಿಸುವ ವಿಶಿಷ್ಟ ದಸಿ ಕಲೆ “ಸಾಂಜಿ” ದ್ವಾಪರ ಯುಗದ ಶ್ರೀಕೃಷ್ಣನಿಗಾಗಿಯೇ ಹುಟ್ಟಿಕೊಂಡಿದ್ದು ಎಂಬ ಪ್ರತೀತಿಯಿದೆ. ಈ ಕಲೆಯನ್ನೇ ಉಸಿರಾಗಿ ಬದುಕುತ್ತಿರುವ ಕಲಾವಿದ ಎಸ್.ಎಸ್. ಹುಸೇನಿ ಕಳೆದ 25 ವರ್ಷಗಳಿಂದ ರಾಜ್ಯದಾದ್ಯಂತ ಸುತ್ತುತ್ತಾ ಸಾವಿರಾರು ಮಕ್ಕಳಿಗೆ ಕಾರ್ಯಾಗಾರಗಳ ಮೂಲಕ ಕಲಾಭಿರುಚಿ ಮೂಡಿಸುತ್ತಿದ್ದಾರೆ. ಇವರ ಕಲಾಸೇವೆಗೆ ಹಲವಾರು ಪ್ರಶಸ್ತಿಗಳು ಸಂದಿವೆ.
ಕಾಗದ ಕತ್ತರಿ ಕಲೆಯು ಕೇವಲ ಮಕ್ಕಳಿಗೆ ಸೀಮಿತವಾಗಿರದೆ ಎಲ್ಲಾ ವಯೋಮಾನದವರನ್ನು ಚುಂಬಕದಂತೆ ಆಕರ್ಷಿಸುವ ಕಲೆ. ಧ್ಯಾನದಂತೆ, ಒತ್ತಡ ನಿವಾರಣೆಯಂತೆ, ಚಿಕಿತ್ಸೆಯಂತೆ ಬಳಸುವ ಕಲೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಗದ ಕತ್ತರಿ ಕಲೆಯಿಂದ ಬಿಡುವಿನ ಸಮಯದ ಸದುಪಯೋಗ, ಕಲೆಯ ಬಗ್ಗೆ ಆಸಕ್ತಿ, ತಮ್ಮದೇ ಆದ ವಿಭಿನ್ನ ವಿನ್ಯಾಸಗಳ ಕಲ್ಪನೆ, ರಚನೆ, ಕರಕುಶಲ ಕಲೆಗಳ ಬಗ್ಗೆ ಅರಿವು ಮತ್ತು ಮಾಹಿತಿ, ಒಟ್ಟಾರೆ ಈ ಕಲೆಯು ಕ್ರಿಯಾಶೀಲ ಮನಸ್ಸಿಗೆ ಉತ್ತಮ ವೇದಿಕೆ ಎಂದರು.