Melur, Sidlagahtta : NRLM ಸಂಜೀವಿನಿ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆದಿರುವ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಮನೆಗಳಲ್ಲಿಯೇ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಈ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಮಾಸಿಕ ಸಂತೆಯನ್ನು ಆರಂಭಿಸಲು ಸರ್ಕಾರ ಸೂಚಿಸಿದೆ. ಅದರಂತೆ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಆರಂಭಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಮಂಗಳವಾರ ಸಂತೆಯಲ್ಲಿ “ಸಂಜೀವಿನಿ ಮಾಸಿಕ ಸಂತೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರು ತಯಾರಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಿ, ಅವರು ಆರ್ಥಿಕವಾಗಿ ಅಭಿವೃದ್ಧಿ ಪಡಿಸಲು ಉತ್ತೇಜನ ನೀಡುವುದಕ್ಕಾಗಿ ಜಿಲ್ಲಾ ಪಂಚಾಯಿತಿಯು “ಮಾಸಿಕ ಸಂತೆ” ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ (ಎನ್‌ಆರ್‌ಎಲ್‌ಎಂ) ಸಂಜೀವಿನಿ ಯೋಜನೆಯಡಿ ಆರ್ಥಿಕ ನೆರವು ಪಡೆದಿರುವ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿರುವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಈ ಸಂತೆಯನ್ನು ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.
ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಮಾತನಾಡಿ, ಇಂತಹ ಸಂತೆಗಳಲ್ಲಿ ಹೆಚ್ಚಿನ ಸಂಘಗಳು ಪಾಲ್ಗೊಳ್ಳಬೇಕು. ಗುಣಮಟ್ಟದ ಹಾಗೂ ಪರಿಶುದ್ಧವಾದ ಉತ್ಪನ್ನ ತಯಾರಿಸಬೇಕು. ಉತ್ಪನ್ನಗಳ ಬಗ್ಗೆ ಪ್ರಚಾರವನ್ನೂ ಮಾಡಬೇಕು. ಸಾಮಾಜಿಕ ಜಾಲತಾಣಗಳು ಹಾಗೂ ವ್ಯಾಟ್ಸಪ್ ಮೂಲಕ ಉತ್ಪನ್ನಗಳ ಪ್ರಚಾರ ನಡೆಸಿ ಆನ್ ಲೈನ್ ಮೂಲಕ ಮಾರಾಟ ಮಾಡಲು ಪ್ರಯತ್ನಿಸಿ ಎಂದು ಹೇಳಿದರು.
ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕ ಮುನಿರಾಜು ಮಾತನಾಡಿ, ಮೇಲೂರು ವಲಯ ಒಕ್ಕೂಟದ ವತಿಯಿಂದ ಸ್ವಸಹಾಯ ಗುಂಪಿನ ಸದಸ್ಯರು ತಾವುಗಳು ಉತ್ಪಾದಿಸಿದ ಉತ್ಪನಗಳನ್ನು ಮಾರಾಟ ಮತ್ತು ಪ್ರದರ್ಶನ ಮೇಳವನ್ನು ಆಯೋಜಿಸಿದೆ. ಸುಮಾರು 30 ಜನ ಸ್ವಸಹಾಯ ಗುಂಪಿನ ಸದಸ್ಯರು ತಾವು ಉತ್ಪಾದನೆ ಮಾಡಿದ ಪದಾರ್ಥಗಳನ್ನು ತೆಗೆದುಕೊಂಡು ಬಂದು ಈ ಮೇಳದಲ್ಲಿ, ಅರಲ್ಲೂ ಇಂದು ಮಂಗಳವಾರ ಸಂತೆ ಇರುವುದರಿಂದ ಹೆಚ್ಚು ಜನ ಬರುವುದರಿಂದ ಉತ್ತಮ ವ್ಯಾಪಾರ ವಹಿವಾಟು ಆಗುವ ಉದ್ದೇಶದಿಂದ, ಹೆಚ್ಚು ಮಾರಾಟ ಮಾಡಬಹುದೆಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನುಡಿದರು.
ತಾಲ್ಲೂಕಿನ ಮೇಲ್ವಿಚಾರಕ ಬಾಲರಾಜು, ನರಸಿಂಹ, ಮೇಲೂರು ವಲಯದ ಸರಸ್ವತಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ವನಿತಾ ತಿರುಮಲೇಶ್, ಸದಸ್ಯರಾದ ಎಂ.ಕೆ. ರವಿಪ್ರಸಾದ್, ಶಿವಕುಮಾರ್, ದೇವರಾಜ್, ಭಾಗ್ಯಮ್ಮ ಶಿವಕುಮಾರ್, ಗಜೇಂದ್ರ, ಹರೀಶ್ ಕುಮಾರ್, ರಮೇಶ್, ಪಿಡಿಒ ಶಾರದಾ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಭಾಸ್ಕರ್, ಶಿಕ್ಷಕರು, ಹಂಡಿಗನಾಳ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀನಿವಾಸ್, ಕೇಶವಣ್ಣ, ನಾರಾಯಣಸ್ವಾಮಿ, ಸೂರೇಗೌಡ, ಮುನಿಶೆಟ್ಟಿ, ವೆಂಕಣ್ಣ, ಮಂಜುನಾಥ್ ಹಾಗೂ ಮೇಲೂರಿನ ಎಲ್ಲಾ ಸ್ತ್ರೀ ಶಕ್ತಿ ಸಂಘದವರು ಹಾಜರಿದ್ದರು.