Sidlaghatta : ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ, ಪ್ರತಿಯೊಬ್ಬರಲ್ಲೂ ಒಂದೊಂದು ಶಕ್ತಿಯಿರುತ್ತದೆ, ಆಸಕ್ತಿಯಿರುತ್ತದೆ. ತಮ್ಮ ಶಕ್ತಿಯನ್ನು ಗುರುತಿಸಿಕೊಂಡು ಪ್ರತಿಯೊಬ್ಬರೂ ಸಾಧನೆಯ ಮೆಟ್ಟಿಲೇರಬೇಕು, ಪೋಷಕರಿಗೆ ಹುಟ್ಟಿದ ಊರಿಗೆ ಕೀರ್ತಿ ತರಬೇಕು ಎಂದು ಎಸ್.ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ(ಪುಟ್ಟು) ಹೇಳಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದು ಹಾಗೂ ಅವರು ಇನ್ನಷ್ಟು ಸಾಧನೆ ಮಾಡುವಂತೆ ಪ್ರೋತ್ಸಾಹಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಈಗಿನ ವಿದ್ಯಾರ್ಥಿಗಳೇ ಮುಂದಿನ ಭವಿಷ್ಯದ ರೂವಾರಿಗಳು. ವಿದ್ಯಾವಂತರಾಗಿ ಸಮಾಜಕ್ಕೆ ಏನಾದರೂ ಹಿಂದಿರುಗಿಸುವ ಕೆಲಸವನ್ನೂ ಸಹ ಮಾಡಬೇಕು. ಪ್ರತಿಯೊಬ್ಬರ ಬೆಳವಣಿಗೆಯಲ್ಲೂ ಪೋಷಕರು, ಶಿಕ್ಷಕರು, ಸ್ನೇಹಿತರು ಮುಂತಾದವರ ಕಾಣಿಕೆಯಿರುತ್ತದೆ. ಬೆಳೆಯುವ ಹಾದಿಯನ್ನು ಮರೆಯಬಾರದು, ಇತರರಿಗೆ ಸಹಾಯ ಮಾಡುವ ಮನೋಭಾವವನ್ನು ಬಿಡಬಾರದು ಎಂದು ಹೇಳಿದರು.
ವೈದ್ಯ ಹಾಗೂ ನಾಯಕತ್ವದ ತರಬೇತುದಾರ ಡಾ.ವರುಣ್ ಮೂರ್ತಿ ಮಾತನಾಡಿ, ಪರಿಶ್ರಮ, ಶ್ರದ್ಧೆ ಮತ್ತು ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುವ ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಬೇರೆ ಯಾರಿಂದಲೋ ನಾವು ಉದ್ದಾರವಾಗುವುದಿಲ್ಲ. ನಮ್ಮ ಉದ್ದಾರಕ್ಕೆ ನಾವೇ ಶ್ರಮಿಸಬೇಕು. ನಮ್ಮೊಳಗಿನ ಮಿತ್ರನನ್ನು ಪೋಷಿಸಿ, ನಮ್ಮೊಳಗಿನ ಶತ್ರುವನ್ನು ಮಣಿಸಬೇಕು. ಪ್ರಯತ್ನವೆಂಬುದು ನಿರಂತರವಾಗಿರಲಿ ಎಂದು ಪ್ರೇರಣಾದಾಯಕ ಮಾತುಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ತಾಲ್ಲೂಕಿನ ಸುಮಾರು 500 ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟೀವಿ ಹಾಗೂ ಕುಕ್ಕರ್ ಗಳನ್ನು ನೀಡಿ ಗೌರವಿಸಲಾಯಿತು. ವಿವಿಧ ನೃತ್ಯ ಶಾಲೆಗಳ ಮಕ್ಕಳು ನೃತ್ಯ ರೂಪಕಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ಮಾಪಕ ಸೋಮಶೇಖರ್, ಗೌಡನಹಳ್ಳಿ ಮಂಜುನಾಥ್, ಕೋಟಹಳ್ಳಿ ಶ್ರೀನಿವಾಸ್, ಆನೂರು ದೇವರಾಜ್, ಅಶ್ವತ್ಥರೆಡ್ಡಿ, ನಾರಾಯಣರೆಡ್ಡಿ, ಮುನಿರೆಡ್ಡಿ, ಲಕ್ಷ್ಮೀನಾರಾಯಣ್, ಮುನೇಗೌಡ, ಶಶಿಕುಮಾರ್, ವಿಶ್ವನಾಥ್ ಹಾಜರಿದ್ದರು.