ಶಾಲೆಗೆ ಹೋಗಲು ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಟಾಟಾ ಏಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ತಾದೂರು ಗೇಟ್ ಬಳಿ ಮಂಗಳವಾರ ನಡೆದಿದೆ.
ತಾಲ್ಲೂಕಿನ ಬಸವಾಪಟ್ಟಣದ ಚೇತನ್ (13) ಮೃತ ದುರ್ದೈವಿ. ನಗರದ ಖಾಸಗಿ ಶಾಲೆಯೊಂದರಲ್ಲಿ ಆರನೇ ತರಗತಿ ಓದುತ್ತಿರುವ ಚೇತನ್ ಎಂದಿನಂತೆ ಶಾಲೆಗೆ ಹೋಗಲು ತಾದೂರು ಗೇಟ್ ಬಳಿ ನಿಂತಿದ್ದಾಗ ಶಿಡ್ಲಘಟ್ಟದಿಂದ ಜಂಗಮಕೋಟೆ ಕಡೆಗೆ ಹೊರಟಿದ್ದ ಟಾಟಾ ಏಸ್ ವಾಹನ (ಕೆಎ 53 – 4513) ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಟಾಟಾ ಏಸ್ ಚಾಲಕನ ಅತಿ ವೇಗವೇ ಕಾರಣವೆನ್ನಲಾಗಿದೆ. ಟಾಟಾ ಏಸ್ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದು ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.