ವಿದ್ಯಾರ್ಥಿಗಳಿಗೆ ವೈಯಕ್ತಿಕ ಸುರಕ್ಷತೆ, ಕಾನೂನು ಅರಿವು: ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಮಾಹಿತಿ

Sidlaghatta : ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ತಮ್ಮ ಹಕ್ಕುಗಳು, ಕಾನೂನುಗಳು ಹಾಗೂ ವೈಯಕ್ತಿಕ ಸುರಕ್ಷತೆಯ ಬಗ್ಗೆ ಅರಿವು ಹೊಂದಿರಬೇಕು ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ ಹೇಳಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಶಿಕ್ಷಣ, ಉದ್ಯೋಗ ಹಾಗೂ ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರು ಆತ್ಮವಿಶ್ವಾಸ ಬೆಳೆಸಿಕೊಂಡು, ಸ್ಪಷ್ಟ ಗುರಿ ಹೊಂದಿ ಪರಿಶ್ರಮದಿಂದ ಅಭ್ಯಾಸ ಮಾಡುವ ಮೂಲಕ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದರು.
ವಿದ್ಯಾರ್ಥಿಗಳು ಗುಡ್ ಟಚ್ ಮತ್ತು ಬ್ಯಾಡ್ ಟಚ್ ಕುರಿತು ಅರಿವು ಹೊಂದಿರಬೇಕು. ಅಪರಿಚಿತರು ನೀಡುವ ಚಾಕೊಲೇಟ್ ಅಥವಾ ಇತರ ವಸ್ತುಗಳ ಆಮಿಷಕ್ಕೆ ಒಳಗಾಗಬಾರದು. ಅನುಮಾನಾಸ್ಪದ ಘಟನೆಗಳು ಅಥವಾ ಕಿರುಕುಳ ಎದುರಾದರೆ ತಕ್ಷಣ ಪೋಷಕರು ಹಾಗೂ ಶಿಕ್ಷಕರ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.
ವಕೀಲರ ಸಂಘದ ಕಾರ್ಯದರ್ಶಿ ಸಿ.ಜಿ. ಭಾಸ್ಕರ್ ಮಾತನಾಡಿ, ಹದಿಹರೆಯದ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕಾನೂನು ಅರಿವು ನೀಡುವುದು ಅಗತ್ಯ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳಿಗೂ ಪೋಕ್ಸೊ ಕಾಯ್ದೆಯಡಿ ರಕ್ಷಣೆ ಇದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಉದ್ದೇಶದಿಂದ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಮಕ್ಕಳ ಮೇಲೆ ದೌರ್ಜನ್ಯ ಎಸಗುವವರು ಅಪರಿಚಿತರೇ ಆಗಿರಬೇಕೆಂದಿಲ್ಲ. ಸಂಬಂಧಿಕರು ಹಾಗೂ ಪರಿಚಿತರಿಂದಲೂ ತೊಂದರೆ ಎದುರಾಗಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಸಂಪರ್ಕ ಬೆಳೆಸುವಾಗ ಎಚ್ಚರಿಕೆ ವಹಿಸಬೇಕು. ಛಾಯಾಚಿತ್ರಗಳನ್ನು ದುರುಪಯೋಗಪಡಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡುವ ಘಟನೆಗಳ ಬಗ್ಗೆ ಜಾಗರೂಕರಾಗಿರಬೇಕು. ಕಿರುಕುಳ ಎದುರಾದಾಗ ಭಯಪಡದೆ ಪೋಷಕರು ಅಥವಾ ಶಿಕ್ಷಕರಿಗೆ ತಿಳಿಸಿ ಕಾನೂನು ನೆರವು ಪಡೆಯಬೇಕು ಎಂದು ಹೇಳಿದರು.
ಬಾಲ್ಯವಿವಾಹ ಸೇರಿದಂತೆ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆಯೂ ವಿದ್ಯಾರ್ಥಿಗಳು ಅರಿವು ಹೊಂದಿರಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಿ ಉತ್ತಮ ಸಾಧನೆ ಮಾಡುವ ಮೂಲಕ ಪೋಷಕರು ಹಾಗೂ ಶಾಲೆಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಸಹಾಯಕ ಸರ್ಕಾರಿ ಅಭಿಯೋಜಕ ಮೊಹಮದ್ ಖಾಜಾ, ವಕೀಲರಾದ ಸಿ.ಕೆ. ವೆಂಕಟೇಶ್ ಬಾಬು, ಸಿ.ಆರ್.ಪಿ ಶೀಲಾ, ಉಪಪ್ರಾಂಶುಪಾಲ ಮುರಳೀಧರ್, ಶಿಕ್ಷಕರಾದ ಪ್ರಸಾದ್ ಎಸ್.ಎ., ಸಹನಾ ಟಿ., ಶಶಿದೀಪಿಕಾ, ನರೇಶ್ ಜಿ.ಎನ್., ಸಹನಾ ಎ., ರಾಮಪ್ಪ ಸಿದ್ಧಪ್ಪ ಶಿವರಾಯಿ, ತ್ರಿವೇಣಿ ಕೆ.ಪಿ., ಶ್ರೀಲಕ್ಷ್ಮೀ, ಯಲ್ಲಪ್ಪ ಗದ್ದಿನಕೇರಿ ಹಾಗೂ ಸಿದ್ಧು ಹುಣಸೀಕಟ್ಟಿ ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: ಮಕ್ಕಳ ಲೈಂಗಿಕ ದೌರ್ಜನ್ಯ: ಪೋಕ್ಸೊ ಕಾಯ್ದೆಯಡಿ ಭಯಪಡದೆ ದೂರು ನೀಡಿ

For Daily Updates WhatsApp ‘HI’ to 7406303366
Summary in English
At a legal awareness and aid programme on Friday at the Indira Gandhi Residential School in Appegowdanahalli, Sidlaghatta taluk Advocates’ Association president A. Narayanaswamy told students to know their rights, the law and personal safety, including the difference between good touch and bad touch. Association secretary C.G. Bhaskar said all children under 18 are protected under the POCSO (Protection of Children from Sexual Offences) Act and urged students to report harassment to parents or teachers without fear.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news



