Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಮೇಲೆ ಕಣ್ಣಿಟ್ಟಿರುವ ABD ಟ್ರಸ್ಟ್ ನ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಟಿಕೇಟ್ಟಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದು KPCC ಅಧ್ಯಕ್ಷ, ವಿಪಕ್ಷ ನಾಯಕರ ಎದುರು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ತಾಲ್ಲೂಕಿನ ಹಂಡಿಗನಾಳದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ರಾಜೀವ್ ಗೌಡರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಸೇರಿ ರಾಜೀವ್ ಗೌಡ ಅವರಿಗೇನೆ ಬಿ ಫಾರಂ ಕೊಡಬೇಕೆಂಬ ಆಗ್ರಹವನ್ನು ಕೆಪಿಸಿಸಿಗೆ ರವಾನಿಸಿದ್ದಾರೆ.
ಬೆಂಗಳೂರಿನಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸದ ಬಳಿ ಶಕ್ತಿ ಪ್ರದರ್ಶನ ಮಾಡಿ ಟಿಕೇಟ್ ನೀಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲು ನೂರಾರು ವಾಹನಗಳಲ್ಲಿ ಅವರ ಬೆಂಬಲಿಗರು ತೆರಳಿದರು.
ಹಂಡಿಗನಾಳದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಡೆದ ಹಕ್ಕೊತ್ತಾಯ ಸಭೆಯಲ್ಲಿ ರಾಜೀವ್ ಗೌಡರ ಬೆಂಬಲಿಗ, ಶಿಡ್ಲಘಟ್ಟ ನಗರಸಭೆ ಉಪಾಧ್ಯಕ್ಷ ಆದ ಬಿ.ಅಫ್ಸರ್ ಪಾಷ ಮಾತನಾಡಿ, ಕೊರೋನಾ ಸಮಯದಲ್ಲಿ ಈ ಕ್ಷೇತ್ರದ ಜನತೆಯ ಕಷ್ಟಕ್ಕೆ ಸ್ಪಂದಿಸಿದ್ದು ರಾಜೀವ್ ಗೌಡರು.
ಹತ್ತುಆಂಬ್ಯುಲೆನ್ಸ್ ಗಳನ್ನು ನೀಡಿ, ಮನೆ ಮನೆಗೂ ದಿನಸಿ ಕಿಟ್ ಗಳನ್ನು ವಿತರಿಸಿ ವಿದ್ಯಾರ್ಥಿಗಳು, ರೈತರು, ಕಡು ಕಷ್ಟದಲ್ಲಿರುವ ಎಲ್ಲರಿಗೂ ತಮ್ಮ ಕೈಲಾದ ನೆರವು ನೀಡಿ ಧೈರ್ಯ ತುಂಬಿದ್ದಷ್ಟೆ ಅಲ್ಲ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಸಂಘಟಿಸಿ ನಿಮ್ಮೊಂದಿಗೆ ನಾನಿದ್ದೇನೆ ಎಂದು ಆಮಸ್ಥೈರ್ಯ ತುಂಬಿದ್ದೇ ಈ ರಾಜೀವ್ ಗೌಡರು.
ಹಾಗಾಗಿ ಅವರಿಗೇನೆ ಕಾಂಗ್ರೆಸ್ ನಿಂದ ಟಿಕೇಟ್ ಕೊಡಬೇಕು, ನಾವೆಲ್ಲರೂ ಅವರ ಬೆಂಬಲಕ್ಕೆ ನಿಂತು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸುವ ಮೂಲಕ ರಾಜ್ಯ ಕಾಂಗ್ರೆಸ್ ಗೆ ಇನ್ನಷ್ಟು ಶಕ್ತಿ ತುಂಬಲಿದ್ದೇವೆ ಎಂದು ಅವರು ಹೇಳಿದರು.
ಮುಖಂಡ ಸಾದಲಿ ಗೋವಿಂದರಾಜು ಮಾತನಾಡಿ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಂಗಾಲಾಗಿದ್ದಾಗ ನಮ್ಮ ಕೈ ಹಿಡಿದಿದ್ದೇ ಈ ರಾಜೀವ್ ಗೌಡರು, ತಮ್ಮ ಎಬಿಡಿ ಟ್ರಸ್ಟ್ ಮೂಲಕ ಅವರು ಮಾಡದ ಸಮಾಜ ಸೇವೆಯಿಲ್ಲ.
ಅವರ ಹಿಂದೆ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರಿದ್ದೇವೆ, ಅವರಿಗೆ ಟಿಕೇಟ್ ಕೊಟ್ಟರೆ ನಾವೆಲ್ಲರೂ ಅವರನ್ನು ಗೆಲ್ಲಿಸಿ ಕಳುಹಿಸುತ್ತೇವೆ ಇಲ್ಲವೇ ಬೇರೆ ಯಾರಿಗೋ ಟಿಕೇಟ್ ಕೊಟ್ಟರೆ ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಸಾರಿದರು.
ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು ಮಾತನಾಡಿ ರಾಜೀವ್ ಗೌಡಗೆ ಬಿ ಫಾರಂ ಕೊಡುವಂತೆ ಕೆಪಿಸಿಸಿ ಹಾಗೂ ಕಾಂಗ್ರೆಸ್ ನ ಹೈ ಕಮಾಂಡ್ ಗೆ ಒತ್ತಾಯಿಸಿದರು.
ನಂತರ ಅಲ್ಲಿಂದ ನೂರಾರು ಮಂದಿ ಬೆಂಗಳೂರಿನ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಮನೆಯತ್ತ ಹೊರಟರು.
ರಾಜೀವ್ ಗೌಡರ ತಂದೆ ವರದಣ್ಣ, ಕೆಪಿಸಿಸಿ ಸದಸ್ಯ ಗುಡಿಹಳ್ಳಿ ನಾರಾಯಣಸ್ವಾಮಿ, ಜೆ.ಎಂ.ನಾಗರಾಜ್, ಶಮೀವುಲ್ಲಾ, ಜೆ.ಎಂ.ಬಾಲಕೃಷ್ಣ, ಎನ್ಟಿಆರ್, ಕೃಷ್ಣಪ್ಪ, ಕೆ.ಎಂ.ವೆಂಕಟೇಶ್, ಮುನೀಂದ್ರ ಮೊದಲಾದ ಮುಖಂಡರು ಹಾಜರಿದ್ದರು.