ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಸೊರಕಾಯಲಹಳ್ಳಿಯ ಸರ್ವೇ ಸಂಖ್ಯೆ 71ರಲ್ಲಿ ಒತ್ತುವರಿಯಾಗಿದ್ದ 12 ಅಡಿ ವಿಸ್ತೀರ್ಣದ ರಾಜಕಾಲುವೆಯನ್ನು ಶಿರಸ್ತೆದಾರ್ ಮಂಜುನಾಥ್ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಮತ್ತು ಭೂಮಾಪನ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಿದರು.
ಇತ್ತೀಚಿಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಹ ಮಳೆಯ ನೀರು ಸರಾಗವಾಗಿ ಹರಿಯಲು ಅವಕಾಶ ಇಲ್ಲದೇ ಅನೇಕ ರೈತರ ಬೆಳೆಗಳು ಹಾನಿಯಾಗಿತ್ತು. ಈ ಕುರಿತು ಸೊರಕಾಯಲಹಳ್ಳಿ ಸರ್ವೇ ಸಂಖ್ಯೆ 71ರಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಯನ್ನು ತೆರವುಗೊಳಿಸಬೇಕೆಂದು ಸ್ಥಳೀಯರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಶಿರಸ್ತೆದಾರ್ ಮಂಜುನಾಥ್ ಅವರ ನೇತೃತ್ವದಲ್ಲಿ ರಾಜಸ್ವ ನಿರೀಕ್ಷಕ ಪ್ರಶಾಂತ್, ಗ್ರಾಮ ಲೆಕ್ಕಾಧಿಕಾರಿ ನಾಗರಾಜ್, ಭೂಮಾಪನ ಇಲಾಖೆಯ ಚಂದ್ರಶೇಖರ್ ಅವರು ಜೆಸಿಬಿಗಳ ಮೂಲಕ ಕಾರ್ಯಚರಣೆ ನಡೆಸಿ ಸುಮಾರು 12 ಅಡಿ ವಿಸ್ತೀರ್ಣದ ರಾಜಕಾಲುವೆಯನ್ನು ತೆರವುಗೊಳಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆಯಲ್ಲಿ ಸೇತುವೆಯನ್ನು ನಿರ್ಮಿಸಿಕೊಟ್ಟರೆ, ಇನ್ನುಳಿದ ರಾಜಕಾಲುವೆಯನ್ನು ತೆರವುಗೊಳಿಸಿ, ಬೋದಗೂರು ಕೆರೆಗೆ ನೀರು ಹರಿಸುವ ಕೆಲಸವನ್ನು ಮಾಡುವುದಾಗಿ ಶಿರಸ್ತೆದಾರ್ ಮಂಜುನಾಥ್ ಭರವಸೆ ನೀಡಿದ್ದಾರೆ.
ತಾಲ್ಲೂಕಿನ ತುಮ್ಮನಹಳ್ಳಿಯ ರೈತ ಮಂಜುನಾಥ್ ಮಾತನಾಡಿ, ತಾಲ್ಲೂಕಿನಲ್ಲಿ ಸುರಿದ ಮಳೆಯಿಂದ ದೇವಸ್ಥಾನ ಸಂಪೂರ್ಣವಾಗಿ ಮುಳುಗಿ ನೀರು ನಿಂತುಹೋಗಿದ್ದರಿಂದ ಲಕ್ಷಾಂತರ ರೂಗಳ ವೆಚ್ಚ ಮಾಡಿ ಹಾಕಿದ್ದ ಬೆಳೆಗಳು ಮಣ್ಣು ಮತ್ತು ನೀರು ಪಾಲಾಗಿವೆ. ದೊಡ್ಡದಾಸರಹಳ್ಳಿ ರಸ್ತೆಯೆಲ್ಲಾ ಜಾಲವೃತಗೊಂಡಿತ್ತು. ರಾಜಕಾಲುವೆಯನ್ನು ಕೇವಲ ರಸ್ತೆವರೆಗೆ ಮಾತ್ರ ತೆರವುಗೊಳಿಸಿದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ತೊಂದರೆಯಾಗಲಿದೆ. ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಇನ್ನುಳಿದ ರಾಜಕಾಲುವೆಯನ್ನು ತೆರವುಗೊಳಿಸಿ ಮಳೆಯ ನೀರು ಬೋದಗೂರು ಕೆರೆಗೆ ಹರಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.