ನಗರದ ತಾಲ್ಲೂಕು ಕಚೇರಿಯ ಮುಂಭಾಗ ಶುಕ್ರವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳೊಂದಿಗೆ ಕೆಲ ಕಾಲ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಚೇರಿಗೆ ಮನವಿಪತ್ರ ಸಲ್ಲಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದರು.
ದೇಶದಲ್ಲಿ ಬಹುಸಂಖ್ಯಾತರಾಗಿರುವ ರೈತರ ಹೋರಾಟಗಳನ್ನು ಹತ್ತಿಕ್ಕುವ ಜೊತೆಗೆ ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರ ಪೊಲೀಸರ ಮೂಲಕ ಹರಿಯಾಣ ಹಾಗೂ ಪಂಜಾಬ್ ರೈತರ ಮೇಲೆ ನಡೆಸಿರುವ ದೌರ್ಜನ್ಯ ಖಂಡನೀಯ ಎಂದು ಅವರು ಹೇಳಿದರು.
ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ರೈತರು ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಾಂತ ರೀತಿಯಿಂದ ದೆಹಲಿ ಚಲೋ ರ‍್ಯಾಲಿ ನಡೆಸುತ್ತಿದ್ದ ವೇಳೆ ಪೊಲೀಸರ ಮೂಲಕ ರೈತರ ಮೇಲೆ ದೌರ್ಜನ್ಯ ನಡೆಸಿರುವುದು ದೇಶದ ಸಂವಿಧಾನಕ್ಕೆ ಮಾಡಿರುವ ಅಪಮಾನ. ರೈತ ವಿರೋಧಿ ನೀತಿ ಅನುಸರಿಸುವ ಯಾವುದೇ ಸರ್ಕಾರಗಳು ಹೆಚ್ಚಿನ ದಿನ ಅಧಿಕಾರದಲ್ಲಿರುವುದಿಲ್ಲ ಎಂದು ಎಚ್ಚರಿಸಿದರು.
ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರಗಳು ಕೂಡಲೇ ಎಪಿಎಂಸಿ, ಭೂ ಸುದಾರಣೆ, ಭೂ ಸ್ವಾಧೀನ ಕಾಯ್ದೆಗಳನ್ನು ಕೈ ಬಿಡಬೇಕು, ವಿದ್ಯುತ್ ಶುಲ್ಕ ಹೆಚ್ಚು ಮಾಡಿರುವುದನ್ನು ವಾಪಸ್ ಪಡೆಯಬೇಕು, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆಧ್ಯತೆ ನೀಡುವ ಜೊತೆಗೆ ಹಾಲಿನ ಬೆಲೆಯನ್ನು 50 ಕ್ಕೆ ಏರಿಸಬೇಕು. ಜಾತಿಗಳ ಹೆಸರಲ್ಲಿರುವ ಎಲ್ಲಾ ಅಭಿವೃದ್ದಿ ಪ್ರಾಧಿಕಾರಗಳನ್ನು ರದ್ದು ಮಾಡಬೇಕು. ರೇಷ್ಮೆ ಗೂಡಿನ ಬೆಲೆಯನ್ನು 600 ರೂಗಳಿಗೆ ಏರಿಸುವ ಜೊತೆಗೆ ಈಗಾಗಲೇ ಫಾರಂ ನಂ 50 ಹಾಗು 53 ರ ವಿಲೇವಾರಿ ಮಾಡಲು ಸಮಿತಿ ರಚಿಸಿ ರೈತರಿಗೆ ಸಾಗುವಳಿ ಚೀಟಿ ವಿತರಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ತೇದಾರ್ ಮಂಜುನಾಥ್‌ರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ವೇಣುಗೋಪಾಲ್ ಹಾಜರಿದ್ದರು.