ಶಿಡ್ಲಘಟ್ಟ ನಗರ ಹಾಗೂ ಹೊರವಲಯದ ಹಳ್ಳಿಗಳಲ್ಲಿ ಭಾನುವಾರ ಸಂಜೆ ಬಿದ್ದ ಆಲಿಕಲ್ಲಿನ ಮಳೆ ಮತ್ತು ಗಾಳಿಗೆ ರೈತರು ಅಪಾರ ನಷ್ಟವನ್ನು ಅನುಭವಿಸಿದ್ದಾರೆ.
ಹಂಡಿಗನಾಳದ ರೈತ ಜಯರಾಮ್ ಅವರ ಹಿಪ್ಪುನೇರಳೆ ತೋಟದಲ್ಲಿ ಎಲ್ಲಾ ಎಲೆಗಳೂ ಛಿದ್ರವಾಗಿದ್ದು, ಉಪಯೋಗಕ್ಕೆ ಬಾರದಂತಾಗಿದೆ. ಐದು ಎಕರೆ ಪ್ರದೇಶದಲ್ಲಿ ಬೆಳೆದಿರುವ ಕ್ಯಾಪ್ಸಿಕಮ್ ಪಾಲಿ ಹೌಸ್ ಸಮೇತ ನೆಲಕಚ್ಚಿದೆ. ಒಟ್ಟಾರೆ ಸುಮಾರು 20 ಲಕ್ಷ ರೂಗಳಷ್ಟು ನಷ್ಟ ಅನುಭವಿಸಿದ್ದಾರೆ.
“ಐದು ಎಕರೆಯಲ್ಲಿ ಕ್ಯಾಪ್ಸಿಕಮ್ ಬೆಳೆದಿದ್ದೆ. ಡಿಸಿಸಿ ಬ್ಯಾಂಕ್ ನಲ್ಲಿ ಸುಮಾರು ಆರು ಲಕ್ಷ ರೂ ಸಾಲ ಮಾಡಿ ಬೆಳೆದಿದ್ದೆ. ಉತ್ತಮ ಬೆಳೆ ಬಂದಿತ್ತು. ಶೇ 20 ರಷ್ಟು ಬೆಳೆ ಕಟಾವು ಮಾಡಿದ್ದೆವು. ಇನ್ನೂ ಶೇ 80 ರಷ್ಟು ಕ್ಯಾಪ್ಸಿಕಮ್ ತೋಟದಲ್ಲಿತ್ತು. ಒಳ್ಳೆಯ ಬೆಳೆ ಬಂದಿದೆ, ಉತ್ತಮ ಬೆಲೆ ಕೂಡ ಸಿಗುತ್ತಿದೆ ಎಂದುಕೊಂಡೆವು. ಆದರೆ ಸಂಜೆ ಬಿದ್ದ ಭಾರಿ ಮಳೆ ಗಾಳಿಗೆ ಸಿಲುಕಿ ನಮ್ಮ ಆಸೆ ಕನಸುಗಳೆಲ್ಲ ನುಚ್ಚು ನೂರಾಯಿತು. ಕಳೆದ ಮೂರು ವರ್ಷಗಳಿಂದಲೂ ಇದೇ ರೀತಿ ಆಗುತ್ತಿದೆ. ಕೊರೊನಾದಿಂದ ಆಗ ಮಾರುಕಟ್ಟೆಯ ಸಮಸ್ಯೆಯಾಗಿದ್ದರೆ, ಇದೀಗ ಪ್ರಕೃತಿಯ ಮುನಿಸು ನಮ್ಮ ಬೆಳೆಯನ್ನು ಆಹುತಿ ಪಡೆದಿದೆ. ನಮ್ಮ ಕಷ್ಟವನ್ನು ಯಾರೂ ಕೇಳುವವರಿಲ್ಲದಂತಾಗಿದೆ. ತೋಟಗಾರಿಕೆ ಇಲಾಖೆಯವರನ್ನು ಕೇಳಿದರೆ ಬೆಳೆ ವಿಮೆ ಮಾಡಿಸಿದ್ದರೆ ಹಣ ಬರುತ್ತದೆಯಷ್ಟೇ ಎನ್ನುತ್ತಾರೆ.
ರೈತನು ಉದ್ದಾರವಾಗಬೇಕಾದರೆ ಪ್ರಕೃತಿ ಸಹಕಾರ ಕೊಡಬೇಕು, ಒಳ್ಳೆ ಫಸಲು ಬರಬೇಕು ಮತ್ತು ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗಬೇಕು. ಕೊರೊನಾ ಹೊಡೆತದಿಂದ ನಾವಿನ್ನೂ ಚೇತರಿಸಿಕೊಂಡಿಲ್ಲ. ಸಾಲ ತೀರಿಸುವುದು ಹೇಗೆ, ಮಕ್ಕಳ ವಿದ್ಯಾಭ್ಯಾಸ ಹೇಗೆ, ಮದುವೆ ದ್ಯಾವರ ಮಾಡೋದು ಹ್ಯಾಗೆ. ರಸಗೊಬ್ಬರ 25 ಕೇಜಿ 4,500 ರೂಗಳಾಗಿವೆ. ಕೂಲಿ ಕೆಲಸಕ್ಕೆ 600 ರೂ ಕೊಡಬೇಕು. ಒಮ್ಮೆ ಅತಿವೃಷ್ಠಿಯಾದರೆ, ಮತ್ತೊಮ್ಮೆ ಅನಾವೃಷ್ಠಿ. ರೈತರಿಗೆ ಆಗುತ್ತಿರುವ ನಷ್ಟ, ಪಡುವ ಕಷ್ಟ ಮಾತುಗಳಲ್ಲಿ ಹೇಳಲಾಗದು. ರೈತರ ಬಗ್ಗೆ ಎಲ್ಲರೂ ಭಾಷಣ ಮಾಡುತ್ತಾರೆ, ಆದರೆ ಅವರ ಕಷ್ಟಕ್ಕೆ ಯಾರೂ ಆಗುವುದಿಲ್ಲ” ಎಂದು ತಮ್ಮ ನೋವನ್ನು ರೈತ ಜಯರಾಮ್ ತೋಡಿಕೊಂಡರು.