Sidlaghatta : ಸರಳತೆ, ಸ್ವಾವಲಂಬನೆ, ಸತ್ಯಾನ್ವೇಷಣೆ ಮತ್ತು ಸತ್ಯಾಗ್ರಹದೊಂದಿಗೆ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ ಮತ್ತು ಜಯ್ ಜವಾನ್ ಜಯ್ ಕಿಸಾನ್ ಘೋಷಣೆ ಮಾಡಿ ದೇಶದ ಅಹಾರ ಉತ್ಪಾದನೆ ಯಲ್ಲಿ ಸ್ವಾವಲಂಬನೆ ಸಾಧಿಸಲು ಕಾರಣೀಭೂತರಾದ ಲಾಲ್ ಬಹಾದ್ದೂರ್ ಶಾಸ್ತ್ರಿ ರವರ ಜನ್ಮದಿನಾಚಾರಣೆಯಂದು ಶ್ರಮದಾನ ಮಾಡುತ್ತಿರುವುದು ಅರ್ಥಪೂರ್ಣವಾದ ಸೇವಾಕಾರ್ಯ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಮಹಾತ್ಮ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ರವರ ಜನ್ಮದಿನದ ಅಂಗವಾಗಿ ವಾಸವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಾತ್ಮ ಗಾಂಧಿಯವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಶ್ರಮದಾನ, ಸ್ವದೇಶಿ ಉತ್ಪಾದನೆ, ಆರೋಗ್ಯ ಮತ್ತು ಶಿಕ್ಷಣದ ಕುರಿತಾಗಿ ಅವರು ನೀಡಿರುವ ಸಂದೇಶಗಳು ನಮಗೆ ಮಾರ್ಗದರ್ಶಿ ಸೂತ್ರಗಳು ಎಂದರು .
ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ರವರು ದೇಶವನ್ನು ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಜಯ್ ಜವಾನ್ ಜಯ್ ಕಿಸಾನ್ ಘೋಷಣೆ ಮಾಡಿ ದೇಶರಕ್ಷಣೆಗೆ ಮುಖ್ಯರಾದ ಸೈನಿಕರಷ್ಟೇ, ದೇಶದ ಜನರ ಆಹಾರ ಧಾನ್ಯಗಳ ಉತ್ಪಾದನೆ ಮಾಡುವ ರೈತರು ಕೂಡ ಅಷ್ಟೇ ಮುಖ್ಯವೆಂದು ಹೇಳಿ, ಆಧುನಿಕ ಸುಧಾರಿತ ಕೃಷಿ ಪದ್ದತಿಯನ್ನು ಜಾರಿಗೆ ತಂದರು. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ನಮ್ಮ ದೇಶ ಸ್ವಾವಲಂಬನೆ ಸಾಧಿಸಲು ಶಾಸ್ತ್ರೀಯವರ ಕೊಡುಗೆ ಅಪಾರ ಎಂದರು.
ಶಾಸಕರೊಂದಿಗೆ ವಾಸವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ರೈಲ್ವೆ ನಿಲ್ದಾಣದ ಸುತ್ತ ಮುತ್ತ ಪ್ಲಾಸ್ಟಿಕ್ ಬಾಟಲ್ ಗಳು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಪರಿಸರವನ್ನು ಸ್ವಚ್ಛ ಗೊಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಸಮನ್ವಯ ಅಧಿಕಾರಿ ಭಾಸ್ಕರ್ ಗೌಡ, ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ, ಕಾರ್ಯದರ್ಶಿ ರೂಪಸಿ ರಮೇಶ್, ವಿಸ್ಡಂ ನಾಗರಾಜ್, ಮಂಜುನಾಥ್, ತಾದೂರು ರಘು, ರಮೇಶ್, ನಗರಸಭೆಯ ಸದಸ್ಯ ರಾಘವೇಂದ್ರ, ರೈಲ್ವೆ ಸ್ಟೇಷನ್ ಮಾಸ್ಟರ್ ಕುಂದನ್, ಸಂದೀಪ್ ರಾಜ್, ಗಜಲಕ್ಷ್ಮಿ, ಶಿವಕುಮಾರ್, ರವಿಕುಮಾರ್ ಹಾಜರಿದ್ದರು.