ಕೃಷಿಯಲ್ಲಿ ನೂತನ ತಾಂತ್ರಿಕತೆ ಅಳವಡಿಸಿಕೊಂಡು ರಾಗಿ ಮತ್ತು ತೊಗರಿ ಬೆಳೆಯುವುದರಿಂದ ಹೆಚ್ಚಿನ ಉತ್ಪಾದನೆ ಹಾಗೂ ಆದಾಯ ಹೊಂದಬಹುದು ಎಂದು ಕೃಷಿ ಇಲಾಖೆಯ ಉಪನಿರ್ದೇಶಕಿ ಡಾ.ಅನುರೂಪ ಹೇಳಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಜಿ.ಕುರುಬರಹಳ್ಳಿಯ ರೈತ ಭೈರಪ್ಪರ ತೋಟದಲ್ಲಿ ಸೋಮವಾರ ಕೃಷಿ ಇಲಾಖೆಯ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿಯಲ್ಲಿ ಆಯೋಜಿಸಲಾಗಿದ್ದ ರಾಗಿ ಬೆಳೆ ಕ್ಷೇತ್ರೋತ್ವವ ಹಾಗೂ ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರು ಕೃಷಿ ಇಲಾಖೆಯ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವ ಜೊತೆಗೆ ಮಳೆಯಾಶ್ರಿತ ಜಮೀನಿನಲ್ಲಿ ಪರ್ಯಾಯ ಬೆಳೆಯಾಗಿ ತೊಗರಿಬೆಳೆ ಬೆಳೆಯುವುದರಿಂದ ಹೆಚ್ಚಿನ ಆದಾಯ ಪಡೆಯಬಹುದು ಎಂದರು.
ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದ ವಿಸ್ತರಣಾ ತಜ್ಞ ಡಾ.ತನ್ವೀರ್ ಅಹಮದ್ ಮಾತನಾಡಿ, ರಾಗಿ ಬೆಳೆಯ ತಳಿಗಳು ಸಮಗ್ರ ಪೋಷಕಾಂಶಗಳ ನಿರ್ವಾಹಣೆ ನೈಸರ್ಗಿಕವಾಗಿ ಸಿಗುವ ಜೈವಿಕ ಪರಿಕರಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆಹಾರ ಬೆಳೆಯಲು ಸಾಧ್ಯ ಎಂದರು.
ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕ ಸತೀಶ್‌ಕುಮಾರ್ ಮಾತನಾಡಿ, ಬೆಳೆ ಸಮೀಕ್ಷೆಯ ಮಹತ್ವ ಮತ್ತು ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ರೇಷ್ಮೆ ಕೃಷಿ ನಿರ್ದೇಶಕ ತಿಮ್ಮರಾಜು, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಎನ್.ಅಶ್ವತ್ಥನಾರಾಯಣ, ಕೃಷಿ ಇಲಾಖೆ ಅಧಿಕಾರಿ ಮೋಹನ್‌ಕುಮಾರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.