Sidlaghatta : ಯಾವುದೇ ಪಕ್ಷದ ಚಿಹ್ನೆ, ಪ್ರಭಾವಿ ಮುಖಂಡರ ಬೆಂಬಲವಿರದ ನನಗೆ ಕ್ಷೇತ್ರದ ಜನ ಶೇಕಡಾ 30 ರಷ್ಟು ಮತ ನೀಡಿದ್ದಾರೆ. ಕೇವಲ ನನ್ನ ಸೇವೆಯನ್ನು ಪ್ರಾಮಾಣಿಕತೆಯನ್ನು ಪರಿಗಣಿಸಿ ಜನ ಬೆಂಬಲಿಸಿ, ಎರಡನೇ ಸ್ಥಾನ ತಲುಪುವಷ್ಟು ಮತ ಕೊಟ್ಟಿರುವರು. ಭವಿಷ್ಯದಲ್ಲಿ ಇದು ಹೆಚ್ಚಾಗುತ್ತದೆ ಎಂದು ಪಕ್ಷೇತರ ಅಭ್ಯರ್ಥಿ ಆಂಜಿನಪ್ಪ ಪುಟ್ಟು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶಿಡ್ಲಘಟ್ಟ ಕ್ಷೇತ್ರದಲ್ಲಿ 2023 ರ ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ನಡೆಯಿತು. ಸ್ವಾಭಿಮಾನದ ಸಂಕೇತವಾಗಿ ಚುನಾವಣೆಯನ್ನು ಎದುರಿಸಿದೆ. ಚುನಾವಣೆಯ ಫಲಿತಾಂಶ ನಾವು ನಿರೀಕ್ಷೆ ಮಾಡಿದ ರೀತಿ ಜಯ ತಂದುಕೊಡದಿದ್ದರೂ, ಮತದಾರರ ತೀರ್ಪಿಗೆ ತಲೆಬಾಗುತ್ತೇನೆ ಎಂದು ಹೇಳಿದರು.
ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಅಣ್ಣನವರಿಗೆ ಜನ ಹೆಚ್ಚಿನ ಮತ ಕೊಟ್ಟು ಆಶೀರ್ವಾದ ಮಾಡಿದ್ದಾರೆ. ಶಾಸಕರಾಗಿ ಆಯ್ಕೆಯಾದ ಅವರನ್ನು ಅಭಿನಂದಿಸುತ್ತೇನೆ. ಅವರು ಉತ್ತಮವಾದ ಕೆಲಸಗಳನ್ನು ಮಾಡಲಿ ತಾಲ್ಲೂಕಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲಿ. ಜನರ ತೀರ್ಪು ಬಹಳ ಮುಖ್ಯ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತನಾದ ನಾನು ನನ್ನೊಂದಿಗೆ ನಿಂತ ಯುವಕರು ಹಾಗೂ ಮುಖಂಡರೊಂದಿಗೆ ಸೇರಿ ಸಾಕಷ್ಟು, ಪ್ರಯತ್ನ ಹಾಗೂ ಹೋರಾಟವನ್ನು ನಡೆಸಿದೆ. ಜನರನ್ನು ತಲುಪಲು, ಪ್ರಚಾರ ನಡೆಸಲು, ಮತಯಾಚನೆ ಮಾಡಲು ಎಲ್ಲಾ ಪ್ರಯತ್ನ ಮಾಡಿದೆ. ಗೆಲ್ಲುವೆನೆಂಬ ಆಶಾಭಾವನೆಯಿತ್ತು. ಶಿಡ್ಲಘಟ್ಟದ ಜನರು 52,160 ಮತಗಳನ್ನು ನೀಡಿ ಆಶೀರ್ವದಿಸಿದ್ದಾರೆ. ಎರಡನೇ ಸ್ಥಾನವನ್ನು ಪಡೆದೆ. ವಿರೋಧಪಕ್ಷದ ಸ್ಥಾನದಲ್ಲಿ ಶಿಡ್ಲಘಟ್ಟದ ವಿಧಾನಸಭಾ ಕ್ಷೇತ್ರದಲ್ಲಿನ ಜನ ನನ್ನನ್ನು ಕೂರಿಸಿದ್ದಾರೆ. ವಿರೋಧಪಕ್ಷದ ನಾಯಕನಾಗಿ ನಾನು ಏನು ಕೆಲಸ ಮಾಡಬಹುದೋ ಅದನ್ನು ಶ್ರದ್ಧಾಭಕ್ತಿಯಿಂದ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಮಾಡುತ್ತೇನೆ. ಆಡಳಿತ ಪಕ್ಷದವರಿಂದ ಸಮಸ್ಯೆಗಳೇನಾದರೂ ಉಂಟಾದರೆ, ಜನರ ಆಶೋತ್ತರಗಳಿಗೆ ಅವರು ಸ್ಪಂದಿಸದಿದ್ದಲ್ಲಿ, ಶಿಡ್ಲಘಟ್ಟದ ಆಡಳಿತ ಸರಿಯಾದ ರೀತಿ ಕೊಂಡೊಯ್ಯುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕ್ಷೇತ್ರದಲ್ಲಿ ನನಗಾಗಿ ದುಡಿದು 52,160 ಮತಗಳನ್ನು ಪಡೆಯೌ ಶ್ರಮಿಸಿದವರಿಗೆಲ್ಲಾ ನನ್ನ ಕೃತಜ್ಞತೆಗಳು. ಇನ್ನೂ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ನಾನು ಏಕೆ ತಲುಪಲಿಲ್ಲ, ಅವರು ಏಕೆ ಮತ ನೀಡಲಿಲ್ಲ ಎಂಬ ನೋವು ಸಮಸ್ಯೆಯಾಗಿ ಕಾಡುತ್ತಿದೆ. ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಂಡು ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಿಕೊಂಡು, ಭವಿಷ್ಯದಲ್ಲಿ ಶಿಡ್ಲಘಟ್ಟದ ಶಾಸಕ ಪದವಿಯನ್ನು ಜನರ ಆಶೀರ್ವಾದದಿಂದ ಪಡೆಯಲು ಏನೆಲ್ಲಾ ಕೆಲಸ ಮಾಡಬೇಕೋ ಅದನ್ನು ಶ್ರದ್ಧಾಪೂರ್ವಕವಾಗಿ ಮಾಡುತ್ತೇನೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾರೇ ಬಂದರೂ ನನ್ನ ಮನೆ, ಮನಸ್ಸಿನ ಬಾಗಿಲು ಸದಾ ತೆರೆದಿರುತ್ತದೆ. ಸೇವೆಗೆ ಸದಾ ಸಿದ್ಧನಿರುತ್ತೇನೆ ಎಂದು ಹೇಳಿದರು.
ಈ ಸುಧೀರ್ಘ ಚುನಾವಣಾ ಹೋರಾಟದಲ್ಲಿ ಸಾಕಷ್ಟು ಸಮಸ್ಯೆಗಳು, ನೋವು, ನಿಂದನೆ, ಅಪಮಾನ, ತೊಳಲಾಟವನ್ನು ಎದುರಿಸಿದೆ. ಕೆಲವರಂತೂ ನಮ್ಮನ್ನು ತುಚ್ಛವಾಗಿ ಕಂಡರು. ಅದಕ್ಕೆಲ್ಲವೂ ಮತದಾರರೇ ಉತ್ತರ ಕೊಟ್ಟರು. ಇವತ್ತಿನ ದಿನದಲ್ಲಿ ಎರಡನೇ ಸ್ಥಾನದಲ್ಲಿರುವವರು ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದು ದೈವೇಚ್ಛೆ. ನನಗೆ ಮತ ನೀಡಿದವರು ಮತ್ತು ನೀಡದವರನ್ನೂ ಸಹ ಸರಿ ಸಮಾನವಾಗಿ ಭಾವಿಸಿ, ಕ್ಷೇತ್ರದ ಅಭಿವೃದ್ಧಿಯೆಡೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತೇನೆ ಎಂದರು.
ಆನೂರು ದೇವರಾಜ್, ಕೋಟಹಳ್ಳಿ ಕೆ.ಎಂ.ಶ್ರೀನಿವಾಸ್, ಯಮಾಹಾಬಾಬು, ಅಬ್ಲೂಡು ಆಂಜಿನಪ್ಪ ಹಾಜರಿದ್ದರು.