Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಚಂಗಲರಾಯರೆಡ್ಡಿ ವೃತ್ತದಲ್ಲಿ ಶನಿವಾರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ, ಗ್ರಾಮ ಪಂಚಾಯಿತಿ, ಎಸ್.ಸಿ.ಐ ನವಜೀವನ ಸೇವಾ ಸಂಘ, ಎ.ಪಿ.ಡಿ ಸಂಸ್ಥೆ ಸಹಯೋಗದಲ್ಲಿ ಪುನೀತ್ ರಾಜ್ ಕುಮಾರ್ ಪ್ರಥಮ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ವಿಶೇಷ ಚೇತನ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಅವರು ಸೇವಾ ಕಾರ್ಯವನ್ನು ಈ ರೀತಿಯಾಗಿ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟು ಹೋದ ಪುನೀತ್ ರಾಜ್ ಕುಮಾರ್ ಅವರು ನಮಗೆ ಆದರ್ಶ ಎಂದು ತಿಳಿಸಿದರು.
ಕುವೆಂಪು ಅವರು ಹೇಳಿದಂತೆ ಸತ್ತು ಬದುಕಬೇಕಂತೆ. ಪುನೀತ್ ಅವರು ಇಲ್ಲದಿದ್ದರೂ ಸದಾ ಕನ್ನಡಿಗರೆಲ್ಲರ ಮನದಲ್ಲಿ ಸದಾ ಇರುತ್ತಾರೆ. ಇದಕ್ಕೆ ಅವರು ಮಾಡಿರುವ ಸೇವಾ ಕಾರ್ಯಗಳೇ ಕಾರಣ. ಅವರ ಸೇವಾ ಮಾರ್ಗವೇ ನಮಗೆ ಮಾದರಿ. ಈ ದಿನ ಎಲ್ಲರ ಸಹಕಾರದಿಂದ ವಿಶೇಷ ಚೇತನ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ಹಾಗೂ ಬೆನ್ನುಹುರಿ ಅಪಘಾತಕ್ಕೆ ಒಳಗಾದ ವಿಶೇಷಚೇತನರಿಗೆ ಔಷಧಿ ಕಿಟ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸವಲತ್ತು ವಿತರಣೆ: ಪುನೀತ್‌ರಾಜಕುಮಾರ್ ಸ್ಮರಣೆಯಲ್ಲಿ ವಿಕಲಚೇತನರಿಗೆ ಲಕ್ಷಾಂತರ ರೂ.ಮೌಲ್ಯದ ಅಗತ್ಯ ಸಲಕರಣೆಗಳನ್ನು ವಿತರಿಸಲಾಯಿತು. ಸುಮಾರು 14 ಮಂದಿ ವಿಕಲಚೇತನರಿಗೆ ಕಾಲಿಗೆ ಹಾಕಿಕೊಳ್ಳುವ ಗೈಟರ್, ರೊಲೇಟರ್, ವಿಶೇಷ ಶೌಚಾಲಯ ರೆಡಿಮೇಡ್ ಕಮೋಡ್‌ಗಳು, ಕ್ರಚ್ಚಸ್, ಹ್ಯಾಂಡ್‌ಗ್ರಿಪ್ ಸಲಕರಣೆಗಳು, ವಿಕಲಚೇತನರ ವಿಶೇಷ ಸ್ಯಾಂಡಲ್ ಚಪ್ಪಲ್‌ಗಳು, ಕೈಗೆ ಹಾಕಿಕೊಳ್ಳುವ ಬೈಲ್ಯಾಟರಲ್ ಉಪಕರಣಗಳು ಮತ್ತಿತರ ಪರಿಕರಗಳನ್ನು ವಿತರಿಸಲಾಯಿತು. ಅನ್ನದಾನ ನಡೆಯಿತು. ನವಜೀವನಸಂಸ್ಥೆಯ ವತಿಯಿಂದ ಮೇಲೂರು ಗ್ರಾಮಪಂಚಾಯಿತಿ ಅಧ್ಯಕ್ಷ ಉಮೇಶ್ ಅವರನ್ನು ಸನ್ಮಾನಿಸಲಾಯಿತು.
ವಿಜಯಪುರ ರೋಟರಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಪ್ರಮುಖ ಭಾಷಣಕಾರರಾಗಿ ಪುನೀತ್ ರಾಜಕುಮಾರ್ ಅವರ ಬಗ್ಗೆ, ವಿಕಲಚೇತನರು, ನೊಂದವರಿಗೆ ಸೇವೆ ಮಾಡುವ ಬಗ್ಗೆ ಮಾತನಾಡಿದರು. ಗ್ರಾಮಪಂಚಾಯಿತಿ ಅಧಿಕಾರಿ ಶಾರದಮ್ಮ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಧರ್ಮೇಂದ್ರ, ಎಚ್.ಟಿ.ವೀರಣ್ಣಗೌಡ, ಶ್ರೀನಿವಾಸ್, ಮಂಜುನಾಥ್, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಭಾಸ್ಕರ್, ಜಿಲ್ಲಾ ನವಜೀವನ ಸೇವಾಸಂಸ್ಥೆಯ ಅಧ್ಯಕ್ಷ ಬೆಳ್ಳೂಟಿ ಮುನಿರಾಜು, ಕಾರ್ಯದರ್ಶಿ ರವಿಕುಮಾರ್, ಶಿಡ್ಲಘಟ್ಟ ತಾಲ್ಲೂಕು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ತ್ಯಾಗರಾಜು, ಬಿಆರ್‌ಪಿ ಬಿ.ಎಂ.ಜಗದೀಶ್‌ಕುಮಾರ್, ಲಕ್ಷ್ಮಿನಾರಾಯಣ್, ಸುಬ್ರಮಣಿ ಹಾಜರಿದ್ದರು.