Sidlaghatta : ಕನ್ನಡ ಭಾಷೆ, ನಾಡು- ನುಡಿ- ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಕನ್ನಡಿಗರು ಹೊತ್ತುಕೊಳ್ಳಬೇಕು. ಅನೇಕ ಮಹನೀಯರು ಕನ್ನಡದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವುಗಳನ್ನು ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಎಬಿಡಿ ಗ್ರೂಪ್ ಅಧ್ಯಕ್ಷ ರಾಜೀವ್ ಗೌಡ ತಿಳಿಸಿದರು.
ನಗರ ಉಲ್ಲೂರುಪೇಟೆ ಬಳಿಯ ಪುನೀತ್ ರಾಜ್ ಕುಮಾರ್ ವೃತ್ತದಲ್ಲಿ ಮಂಗಳವಾರ ಸ್ನೇಹ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವೃತ್ತದಲ್ಲಿ ಪುನೀತ್ ರಾಜ್ ಕುಮಾರ್ ಪುತ್ಥಳಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯ ಬಗ್ಗೆ ಅಭಿಮಾನ ಇದ್ದಾಗ ಭಾಷಾ ಪೋಷಣೆ ಕುರಿತು ಚಿಂತಿಸುತ್ತೇವೆ. ಅದೇ ದುರಭಿಮಾನ ಇದ್ದರೆ ಇನ್ನೊಂದು ಭಾಷೆಯನ್ನು ದ್ವೇಷಿಸಲು ಬಯಸುತ್ತೇವೆ. ಎಲ್ಲ ಭಾಷೆಯನ್ನು ಒಪ್ಪಿಕೊಂಡು ನಮ್ಮ ಭಾಷೆ ಬೆಳೆಸಲು ಮುಂದಾಗಬೇಕು. ಕನ್ನಡ ಶ್ರೀಮಂತ ಭಾಷೆಯಾಗಿದೆ. ಯುವಜನತೆ ನಾಡು, ನುಡಿ ಉಳಿಸಿ ಬೆಳೆಸುವ ಕಾರ್ಯದಲ್ಲಿ ನಿರತರಾಗಬೇಕು ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಗರಸಭೆ ಸದಸ್ಯರಾದ ಎಲ್.ಅನಿಲ್ ಕುಮಾರ್, ಮಂಜುನಾಥ್, ಸಹನಾ ರಾಜೀವ್ ಗೌಡ, ಪೌರಾಯುಕ್ತ ಶ್ರೀಕಾಂತ್, ಸ್ನೇಹ ಯುವಕರ ಸಂಘದ ಭರತ್, ಶ್ರೀನಿವಾಸ್, ನವೀನ್, ಸುನಿಲ್, ಮಂಜುನಾಥ್, ಗಿರಿಧರ್, ಮುನಿರಾಜು ಹಾಜರಿದ್ದರು.