Sidlaghatta : ನಲ್ಲಿ ನೀರನ್ನು ಸಮರ್ಪಕವಾಗಿ ಪೂರೈಸುವಂತೆ ಆಗ್ರಹಿಸಿ ನಗರದ ಆಶ್ರಯ ಬಡಾವಣೆಯ ನಾಗರಿಕರು, ಮಹಿಳೆಯರು ನಗರಸಭೆ ಕಚೇರಿ ಎದುರು ಖಾಲಿ ಕೊಡಗಳೊಂದಿಗೆ ಸೋಮವಾರ ಪ್ರತಿಭಟನೆ ನಡೆಸಿದರು.
ಕಳೆದ ಹಲವು ದಿನಗಳಿಂದಲೂ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಕೂಲಿ ಕಾರ್ಮಿಕರು, ರೇಷ್ಮೆ ನೂಲು ಬಿಚ್ಚಾಣಿಕೆ ಕಾರ್ಮಿಕರೆ ಹೆಚ್ಚಿರುವ ಇಲ್ಲಿ ಹಣ ಕೊಟ್ಟು ನೀರನ್ನು ಖರೀದಿಸುವಂತಾಗಿದ್ದು ಸಂಪಾದನೆಯ ಬಹುಪಾಲು ಹಣವನ್ನು ನೀರಿಗೆ ಖರ್ಚು ಮಾಡುವಂತಾಗಿದೆ ಎಂದು ಅವಲತ್ತುಕೊಂಡರು.
ಈ ಹಿಂದೆ ಹತ್ತು ಹದಿನೈದು ದಿನಕ್ಕೊಮ್ಮೆ ನಲ್ಲಿ ನೀರನ್ನು ಪೂರೈಸುತ್ತಿದ್ದು ಇದೀಗ ಎರಡು ತಿಂಗಳು ಕಳೆದರೂ ನೀರು ಬರುತ್ತಿಲ್ಲ. ವಾರ್ಡಿನಲ್ಲಿ ಕೊಳವೆ ಬಾವಿಗಳಿದ್ದು ಅದರಲ್ಲಿ ನೀರು ಇದ್ದರೂ ಪಂಪು ಮೋಟಾರ್ ಬಿಟ್ಟಿಲ್ಲ, ಕೆಟ್ಟು ತಿಂಗಳುಗಳಾಗಿದ್ದರೂ ಅದರ ದುರಸ್ತಿ ಮಾಡಿಲ್ಲ ಎಂದು ದೂರಿದರು.
ಹಾಗಾಗಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು ಅಧಿಕಾರಿಗಳನ್ನು ಕೇಳಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ನಗರಸಭೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ರವಿಕುಮಾರ್ ಅವರು ಶಾಸಕರಾದ ಕೂಡಲೆ ವಾರ್ಡಿನಲ್ಲಿ ಸ್ವಚ್ಚತಾ ಕಾರ್ಯ ನಡೆಸಿದ್ದು ಬಿಟ್ಟರೆ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆ ಕಡೆ ಕಾಲಿಟ್ಟಿಲ್ಲ. ನಮ್ಮ ಕಷ್ಟ ಸುಖ ಕೇಳೋರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಗರಸಭೆ ಪೌರಾಯುಕ್ತ ಆಂಜನೇಯಲು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ನಾನು ಹೊಸದಾಗಿ ಪೌರಾಯುಕ್ತನಾಗಿ ಅಧಿಕಾರವಹಿಸಿಕೊಂಡಿದ್ದೇನೆ. ನಾಳೆಯೆ ವಾರ್ಡಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು. ಶೇಖ್ ಬಾಬಾ ಜಾನ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.