ಕೊರೊನಾ ಸೋಂಕು ಖಾಸಗಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಯ ಜೀವ ಮತ್ತು ಜೀವನವನ್ನು ಕಸಿದಿದೆ. ಖಾಸಗಿ ಶಾಲಾ ಶಿಕ್ಷಕರು ಜೀವಂತ ಶವಗಳಾಗಿದ್ದೇವೆ. ನಮ್ಮೆಡೆಗೆ ಸರ್ಕಾರ ಕಣ್ತೆರೆದು ನೋಡಲಿ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ತಾಲ್ಲೂಕು ಒಕ್ಕೂಟದ ಸದಸ್ಯರು ನಗರದ ಕೋಟೆ ವೃತ್ತದಲ್ಲಿ ಬುಧವಾರ ಪ್ರತಿಭಟಿಸಿ ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ನಡೆಸಲು ತೆರಳಿದರು.
ಕ್ರೆಸೆಂಟ್ ಶಾಲೆಯ ತಮೀಮ್ ಅನ್ಸಾರಿ ಮತ್ತು ಎಸ್.ಆರ್.ಇ.ಟಿ ವಿದ್ಯಾಸಂಸ್ಥೆಯ ಶ್ರೀರಾಮರೆಡ್ಡಿ ಮಾತನಾಡಿ, ಸರ್ಕಾರ ಖಾಸಗಿ ಶಾಲಾ ಶಿಕ್ಷಕರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಶಿಕ್ಷಕರು ಅತಂತ್ರರಾಗಿದ್ದಾರೆ. ಸರ್ಕಾರ ನಮ್ಮ ಪರವಾಗಿ ನಿಲ್ಲಬೇಕು. ಪೋಷಕರು ಶಾಲಾ ಶುಲ್ಕವನ್ನು ಪಾವತಿಸುವುದನ್ನು ಖಡ್ಡಾಯಗೊಳಿಸಿ, ಇಲ್ಲವೇ ಪರಿಹಾರ ಧನ ನೀಡಬೇಕೆಂದು ಘೋಷಿಸಿ. ದ್ವಂದ್ವ ಹೇಳಿಕೆಗಳನ್ನು ಕೊಡದೇ ಮಲತಾಯಿ ಧೋರಣೆ ಮಾಡದೇ ನಮಗೆ ಸರಿಯಾದ ಪರಿಹಾರೋಪಾಯವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಡಾಲ್ಪಿನ್ ವಿದ್ಯಾಸಂಸ್ಥೆಯ ಎ.ನಾಗರಾಜು, ಮಹದೇವ್, ಗೋಪಿನಾಥ್, ವಿಸ್ಡಮ್ ನಾಗರಾಜು, ಮಂಜುನಾಥ್, ಮಹೇಶ್, ಶಾಂತರಾಜು, ತಾಲ್ಲೂಕಿನ ಖಾಸಗಿ ಶಾಲೆಯ 673 ಶಿಕ್ಷಕರು ಭಾಗಿಯಾಗಿದ್ದರು.