ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ಹಾಗೂ ಎಚ್.ಕ್ರಾಸ್ ಗಳಲ್ಲಿನ ಖಾಸಗಿ ಕ್ಲಿನಿಕ್ ಗಳು ಹಾಗೂ ಲ್ಯಾಬ್ ಗಳಿಗೆ ಪರಿವೀಕ್ಷಣೆ ನಡೆಸಿ, ಪರವಾನಗಿ ಪತ್ರಗಳನ್ನು ಪರಿಶೀಲಿಸಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿದರು.
ತಾಲ್ಲೂಕಿನ ಹದಿನೈದು ಖಾಸಗಿ ಕ್ಲಿನಿಕ್ ಗಳು ಹಾಗೂ ಲಾಬ್ ಗಳನ್ನು ಪರಿಶಿಲನೆ ನಡೆಸಿದ್ದು, ಖಡ್ಡಾಯವಾಗಿ ಜಿಲ್ಲಾಧಿಕಾರಿ ಅನುಮತಿ ಹಾಗೂ ಕೆ.ಪಿ.ಎಂ.ಇ ನೋಂದಣಿ ಪತ್ರವನ್ನು ಹೊಂದಿರಬೇಕೆಂದು ಸೂಚಿಸಿದ್ದೇವೆ ಎಂದು ಅವರು ತಿಳಿಸಿದರು.
ಈ ದಿನ ನಾವು ಪರಿವೀಕ್ಷಣೆ ನಡೆಸಿದ ಹದಿನೈದೂ ಕಡೆ ಜಿಲ್ಲಾಧಿಕಾರಿ ಅನುಮತಿ ಹಾಗೂ ಕೆ.ಪಿ.ಎಂ.ಇ ನೋಂದಣಿ ಪತ್ರವಿಲ್ಲದಿರುವುದು ಕಂಡುಬಂದಿತು. ಪಡೆದಿದ್ದರೂ ನವೀಕರಣ ಮಾಡಿಸಿರಲಿಲ್ಲ. ಕೆಲವರು ಸರಿಯಾದ ವಿದ್ಯಾರ್ಹತೆ ಇಲ್ಲದೆಯೇ ಆಲೋಪತಿ ಚಿಕಿತ್ಸೆ ನೀಡುತ್ತಿದ್ದರು. ಅಂತಹವರನ್ನು ನಕಲಿ ವೈದ್ಯರೆಂದು ಪರಿಗಣಿಸಲಾಗುವುದು. ಕೆಲವೆಡೆ ಸ್ವಚ್ಛತೆಯನ್ನು ಕಾಪಾಡಿಕೊಂಡಿರಲಿಲ್ಲ. ತ್ಯಾಜ್ಯದ ವಿಲೇವಾರಿ ಸಮರ್ಪಕವಾಗಿರಲಿಲ್ಲ. ಪ್ರತಿಯೊಬ್ಬರಿಗೂ ಈ ಬಗ್ಗೆ ಎಚ್ಚರಿಸಿದ್ದೇವೆ.
ಆರೋಗ್ಯ ಇಲಾಖೆಯ ಪರಿವೀಕ್ಷಣಾ ತಂಡವಿರುತ್ತದೆ ಅದರಲ್ಲಿ ನನ್ನನ್ನೂ ಸೇರಿದಂತೆ, ಡಾ.ಡಿ.ಟಿ.ಸತ್ಯನಾರಾಯಣರಾವ್, ಡಾ.ವಾಣಿ, ತಹಶೀಲ್ದಾರ್ ಹಾಗೂ ಪೊಲೀಸ್ ಇರುತ್ತಾರೆ. ಇನ್ನು ಮೂರ್ನಾಕು ದಿನಗಳಲ್ಲಿ ಆರೋಗ್ಯ ಇಲಾಖೆಯ ಪರಿವೀಕ್ಷಣಾ ತಂಡದೊಡನೆ ಬರುತ್ತೇವೆ. ಪ್ರತಿಯೊಬ್ಬರೂ ಅನುಮತಿ ಹಾಗೂ ನೋಂದಣಿ ಪತ್ರವನ್ನು ಹೊಂದಿರಬೇಕು. ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ತಾಲ್ಲೂಕಿನಾದ್ಯಂತ ಇನ್ನು ಮುಂದೆ ಕೆ.ಪಿ.ಎಂ.ಇ ನೋಂದಣಿ ಇರದೆ ಯಾರೊಬ್ಬರೂ ಕ್ಲಿನಿಕ್ ತೆರೆಯಬಾರದು. ಅವರ ಓದಿಗೆ ತಕ್ಕಂತೆ ಅವರು ಚಿಕಿತ್ಸೆ ನೀಡಬೇಕು. ತಪ್ಪಿದ್ದಲ್ಲಿ ಅಪರಾಧವೆಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ದೇವರಾಜ್, ಕಿರಿಯ ಆರೋಗ್ಯ ನಿರೀಕ್ಷಕ ಸುನಿಲ್ ಉಪಸ್ಥಿತರಿದ್ದರು.