Sidlaghatta : ಶಿಡ್ಲಘಟ್ಟ ನಗರದ ಪತ್ರಕರ್ತರ ಭವನದ ರಸ್ತೆಯ ಸಿಮೆಂಟ್ ರಸ್ತೆಯ ಕಾಮಗಾರಿ ಕಾರ್ಯಕ್ರಮದ ಗುದ್ದಲಿ ಪೂಜೆ ನೆರವೇರಿಸಿ ಪತ್ರಿಕಾ ಗೋಷ್ಠಿಯಲ್ಲಿ (Press Meet) ಶಾಸಕ ವಿ.ಮುನಿಯಪ್ಪ (V Muniyappa) ಅವರು ಮಾತನಾಡಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನನ್ನ ಸ್ಪರ್ಧೆ ಖಚಿತ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ತತ್ವ ಸಿದ್ದಾಂತಗಳ ಪಕ್ಷ. ಕೇವಲ ಅಧಿಕಾರಕ್ಕಾಗಿ ಎಲ್ಲಿಂದಲೋ ಬಂದವರಿಗೆ ಪಕ್ಷದಲ್ಲಿ ಅಗ್ರ ಸ್ಥಾನ ಸಿಗಲಾರದು. ಆರು ಬಾರಿ ವಿಧಾನಸಭಾ ಕ್ಷೇತ್ರ ಮತ್ತು ಒಂದು ಬಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಜನಪರ ಕೆಲಸಗಳನ್ನು ಮಾಡಿದ ನನ್ನ ಸೇವಾ ಕಾರ್ಯದ ಬಗ್ಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಸ್ಪಷ್ಟವಾಗಿ ಗೊತ್ತಿದೆ ಎಂದರು.
ಮುಂಬರುವ ಚುನಾವಣೆಯಲ್ಲಿ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಾಜೀವ್ ಗೌಡ ರವರೆಗೆ ಪಕ್ಷದ ಟಿಕೆಟ್ ಎಂದು ಪ್ರಚಾರ ಆಗುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ, ಅಂತೆ ಕಂತೆಗಳ ಊಹಾ ಪೋಹದ ಮಾತುಗಳಿಗೆ ನಾನು ಉತ್ತರ ಕೊಡಲಾರೆ. ಹಾಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದೇ ತಿಂಗಳು ನಗರದಲ್ಲಿ ರಾಜೀವ್ ಗೌಡರು ನಡೆಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತಂತೆ ಮಾಡಿದ ಪ್ರಶ್ನೆಗೆ, ಈ ಬಗ್ಗೆ ನನ್ನಲ್ಲಿ ಯಾವುದೇ ಮಾಹಿತಿ ಇಲ್ಲ. ಖಾಸಗಿ ಕಾರ್ಯಕ್ರಮಕ್ಕೆ ಬರುವುದು ಬಿಡುವುದು ಅವರಿಗೆ ಸೇರಿದ್ದು. ತಮ್ಮ ಮಗ ಶಶಿಧರ್ ರಾಜಕೀಯ ನನಗೆ ಬೇಡ ಎಂದಿರುವುದರಿಂದ ಸ್ಪರ್ಧೆಯಲ್ಲಿ ಆತ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಗರದ ಬೈಪಾಸ್ ರಸ್ತೆ, ದಿಬ್ಬೂರಹಳ್ಳಿ ರಸ್ತೆಗಳ ದುರಸ್ತಿಯ ಬಗ್ಗೆ ಮಾಡಿದ ಪ್ರಶ್ನೆಗೆ, ದಿನನಿತ್ಯ ಇದೇ ರಸ್ತೆಯಲ್ಲಿ ಒಡಾಡುತ್ತೇನೆ. ರಸ್ತೆಗಳಲ್ಲಿ ಓಡಾಟ ಮಾಡಲು ನನಗೆ ನಾಚಿಕೆಯಾಗುತ್ತದೆ. ಕೆಲವೇ ದಿನಗಳಲ್ಲಿ ದುರಸ್ತಿ ಮಾಡಿಸಿ, ಡಾಂಬಾರ್ ಹಾಕುವ ಬಗ್ಗೆ ಕ್ರಮ ತೆಗದುಕೊಳ್ಳುತ್ತೇನೆ ಎಂದರು
ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ. ಹಣದ ಆಸೆಗೆ ಕೆಲವು ಪುಡಿ ಕಾರ್ಯಕರ್ತರು, ನಕಲಿ ಸಮಾಜ ಸೇವಕರ ಹಿಂದೆ ಬಿದ್ದಿದ್ದು, ಚುನಾವಣೆ ಘೋಷಣೆ ಯಾದಲ್ಲಿ ತಾವಾಗಿಯೇ ಪಕ್ಷಕ್ಕೆ ಬರಲಿದ್ದಾರೆ ಎಂದರು.
ನಗರದ ಸಮೀಪವೆ ಜವಳಿ ಪಾರ್ಕ್ ಮಾಡುವ ಬಗ್ಗೆ ಹಿರಿಯ ಅಧಿಕಾರಿಗಳು ಸಮೀಕ್ಷೆ ಮಾಡಿದ್ದಾರೆ. ಶೀಘ್ರವಾಗಿ ಕಾರ್ಯರಂಭವಾಗಲಿದೆ ಎಂದರು. ಯಾರು ಏನೇ ಹೇಳಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವದು ಶತಸ್ಸಿದ್ಧ. ನಿಷ್ಠಾವಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ. ನಿರ್ಭಯವಾಗಿ ತಮ್ಮದೇ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಈಗಿನಿಂದಲೇ ಜನರ ಬಳಿ ಹೋಗಿ ಕಾಂಗ್ರೆಸ್ ಪಕ್ಷದ ಸೇವಾಕಾರ್ಯಗಳ ಬಗ್ಗೆ ತಿಳಿಸಬೇಕೆಂದು ಕರೆ ನೀಡಿದರು.
ಶಿಡ್ಲಘಟ್ಟ ತಾಲ್ಲೂಕು ಕಾಂಗ್ರೆಸ್ ಪಕ್ಷದ ಬದ್ರಕೋಟೆಯಾಗಿದ್ದು, ಇಲ್ಲಿ ಯಾವುದೇ ಯಾರದೇ ಮಾತು ನಡೆಯಲಾರದು. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಈಗಿಂದಲೇ ಮತದಾರರ ಮನಗೆಲ್ಲಬೇಕಾಗಿದೆ ಎಂದರು.
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಸುಬ್ರಮಣಿ, ಮಧುಸೂದನ್, ಪಂಪ್ ನಾಗರಾಜ್ ಹಾಜರಿದ್ದರು.