Dibburahalli, Sidlaghatta : ವಿದ್ಯುತ್ ತಂತಿಗಳನ್ನು ಕಳವು ಮಾಡುತ್ತಿದ್ದ ಮೂವರು ಅಂತರಾಜ್ಯ ಕಳ್ಳರನ್ನು ದಿಬ್ಬೂರಹಳ್ಳಿ ಠಾಣೆ ಪೊಲೀಸರು ಬಂದಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಪಂಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಮದ್ ಸಿದ್ದೀಕ್(೨೭), ಬೈಲ್‌ನರಸಾಪುರದ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ರಿಜ್ವಾನ್‌ಖಾನ್(೨೧), ಬೆಂಗಳೂರು ಚಾಮರಾಜಪೇಟೆಯ ಗುಜರಿ ವ್ಯಾಪಾರಿ ಹಯಾಜ್(೨೮) ಬಂದಿತರು.
ಬಂದಿತ ಆರೋಪಿಗಳಿಂದ ೫.೫ ಲಕ್ಷ ನಗದು, ೧.೯೪ ಲಕ್ಷ ರೂ.ಮೌಲ್ಯದ ವಿದ್ಯುತ್ ತಂತಿಗಳನ್ನು ಹಾಗೂ ಕಳವು ಮಾಡಿದ ವಿದ್ಯುತ್ ತಂತಿಗಳನ್ನು ಸಾಗಾಟ ಮಾಡಲು ಬಳಸುತ್ತಿದ್ದ ಕ್ಯಾಂಟರ್‌ನ್ನು ವಶಪಡಿಸಿಕೊಳ್ಳಲಾಗಿದೆ.
ತಾಲ್ಲೂಕಿನ ಬಶೆಟ್ಟಹಳ್ಳಿ ಭಾಗದಲ್ಲಿ ೨೨೦ ಕೆವಿ ವಿದ್ಯುತ್ ಮಾರ್ಗದ ಲೈನ್‌ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದ್ದಾಗ ರಾತ್ರಿ ವೇಳೆ ಬಂದಿತ ಆರೋಪಿಗಳ ತಂಡವು ವಿದ್ಯುತ್ ಲೈನ್ ತಂತಿಗಳನ್ನು ಕದ್ದಿದ್ದರು. ವಿದ್ಯುತ್ ತಂತಿ ಮಾರ್ಗದ ಅಳವಡಿಕೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರ ಪರವಾಗಿ ಅಬ್ದುಲ್ ಎನ್ನುವವರು ಕಳೆದ ಡಿಸೆಂಬರ್‌ನಲ್ಲಿ ದಿಬ್ಬೂರಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಮೂವರು ಇತರರೊಂದಿಗೆ ಸೇರಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಆಂದ್ರದ ಗಡಿ ಭಾಗದ ಹಲವು ಕಡೆ ವಿದ್ಯುತ್ ತಂತಿಗಳನ್ನು ಕದ್ದು ಮಾರಾಟ ಮಾಡುತ್ತಿದ್ದು ಆಂಧ್ರದ ಹಲವು ಠಾಣೆಗಳಲ್ಲದೆ ಶ್ರೀನಿವಾಸಪುರ, ಗೌನಿಪಲ್ಲಿ ಹಾಗೂ ದಿಬ್ಬೂರಹಳ್ಳಿ ಇನ್ನಿತರೆ ಠಾಣೆಗಳಲ್ಲಿ ಇವರ ಮೇಲೆ ಮೊಕದ್ದಮೆ ದಾಖಲಾಗಿವೆ.
ವಿದ್ಯುತ್ ತಂತಿ ಕಳುವು ಮಾಡಿ ಮಾರಾಟ ಮಾಡುವ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು ಅವರ ಪತ್ತೆ ಕಾರ್ಯವನ್ನು ಪೊಲೀಸರು ಮುಂದುವರೆಸಿದ್ದಾರೆ.
ಸಿಪಿಐ ಎಂ.ಶ್ರೀನಿವಾಸ್‌ಮೂರ್ತಿ ಅವರ ಮಾರ್ಗದರ್ಶನದಲ್ಲಿ ದಿಬ್ಬೂರಹಳ್ಳಿ ಎಸ್‌ಐ ರಾಜೇಶ್ವರಿ ಅವರ ನೇತೃತ್ವದಲ್ಲಿನ ಎಎಸ್‌ಐ ನಾಗರಾಜ್, ಅಪರಾಧ ಪತ್ತೆ ತಂಡ ಪೇದೆಗಳಾದ ನಂದಕುಮಾರ್, ನರಸಿಂಹಯ್ಯ, ಮುರಳಿಕೃಷ್ಣ, ಲೊಕೇಶ್, ಚಂದಪ್ಪ ಯಲಿಗಾರ, ಕೃಷ್ಣಪ್ಪ, ವಸಂತಕುಮಾರ್, ತಾಂತ್ರಿಕ ಸಿಬ್ಬಂದಿ ರವಿಕುಮಾರ್, ಮುನಿಕೃಷ್ಣ ರವರನ್ನೊಳಗೊಂಡ ತಂಡವು ಆರೋಪಿಗಳನ್ನು ಪತ್ತೆ ಹಚ್ಚಿ ಬಂದಿಸಿದ್ದಾರೆ. ಎಸ್‌ಪಿ ನಾಗೇಶ್, ಡಿವೈಎಸ್ಪಿ ಮುರಳೀಧರ್ ಅವರು ದಿಬ್ಬೂರಹಳ್ಳಿ ಠಾಣೆ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.