ಶಿಡ್ಲಘಟ್ಟ ನಗರದಲ್ಲಿ ಅನಾದಿ ಕಾಲದಿಂದಲೂ ನೆರವೇರಿಸಿಕೊಂಡು ಬಂದಂತಹ ಪೂಜಮ್ಮ ದೇವಿಯ ಕರಗಮಹೋತ್ಸವವನ್ನು ಗುರುವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಂಪ್ರದಾಯ ಆಚಾರಗಳಂತೆ ದೇವಾಲಯದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿ ನಂತರ ಹೂವಿನ ಕರಗವನ್ನು ಹೊರಲಾಯಿತು.
ಶ್ರೀ ಪೂಜಮ್ಮ ದೇವಿಯ ಕರಗವನ್ನು ಮುಳಬಾಗಿಲಿನ ಶಂಕರಪ್ಪ ರವರು ಹೊತ್ತಿದ್ದರು. ಶಿರದ ಮೇಲೆ ಕಳಶ ಹೊತ್ತು ಕುಣಿಯುವ ಕಲೆಯಾಗಿದ ಕರಗದಾಚರಣೆ ಎಂದರೆ ಆದಿಶಕ್ತಿಯ ಆಚರಣೆ ಎಂದು ನಂಬಲಾಗಿದೆ. ದೇವಸ್ಥಾನಕ್ಕೆ ಮೂರು ಸುತ್ತು ಪ್ರದರ್ಶನ ಮಾಡಿ ನಂತರ ಮಾರಮ್ಮ ವೃತ್ತದಲ್ಲಿ ಮತ್ತು ಕೋಟೆ ವೃತ್ತದಲ್ಲಿ ಆಯೋಜನೆ ಮಾಡಲಾಗಿದ್ದ ವಾದ್ಯಗೋಷ್ಠಿಯ ವೇದಿಕೆಯಲ್ಲಿ ಕರಗ ಹೊತ್ತ ಶಂಕರಪ್ಪ ನವರು ತಮಟೆಯ ಶಬ್ದಕ್ಕೆ ಹೆಜ್ಜೆ ಹಾಕಿ ಕುಣಿದಾಡಿದರು. ಅಲ್ಲಿದ್ದ ಸಾರ್ವಜನಿಕರು ಕರಗವನ್ನು ನೋಡಿ ಮನಸೋತಿದ್ದಲ್ಲದೇ ವಾದ್ಯಗೋಷ್ಠಿಯ ತಂಡದವರ ಸಂಗೀತಕ್ಕೆ ತಕ್ಕಂತೆ ಕುಣಿದರು.
ವಿಶೇಷವಾಗಿ ಪುನೀತ್ ರಾಜ್ ಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಹೆಚ್ಚಾಗಿ ವಾದ್ಯಗೋಷ್ಠಿಯಲ್ಲಿ ಅಪ್ಪುರವರ ಹಾಡುಗಳೇ ಹೆಚ್ಚಾಗಿ ಹಾಡಲಾಯಿತು. ಈ ಸಮಯದಲ್ಲಿ ಅಪ್ಪುರವರಿಗೆ ಗೌರವ ಸೂಚಿಸಿ ವೇದಿಕೆ ಮುಂಭಾಗದಲ್ಲಿ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.
ದೇವಿಯ ಕರಗ ವೀಕ್ಷಿಸಲು ಬರೀ ನಗರವಲ್ಲದೇ ತಾಲ್ಲೂಕಿನಾದ್ಯಂತ ಜನರು ಆಗಮಿಸಿದ್ದರು. ವಾದ್ಯಗೋಷ್ಠಿಯಲ್ಲಿ ಹಿಂದಿ, ಕನ್ನಡ, ತೆಲುಗು, ತಮಿಳು ಹಾಡುಗಳನ್ನು ವಾದ್ಯಗೋಷ್ಠಿ ತಂಡದವರು ಹಾಡಿ ನೃತ್ಯಗಳನ್ನು ಮಾಡಿದ್ದನ್ನು ನೋಡಿ ಕಣ್ತುಂಬಿಸಿಕೊಂಡರು.
ಎರಡು ವರ್ಷಗಳಿಂದ ಕೋವಿಡ್ ಇದ್ದ ಕಾರಣದಿಂದ ಸರಿಯಾದ ಯಾವುದೇ ಉತ್ಸವ ಹಾಗೂ ಮಹೋತ್ಸವಗಳು ನಡೆಯುತ್ತಿರಲಿಲ್ಲ ಈಗ ಯಾವುದೇ ಅಡತಡೆಗಳು ಇಲ್ಲದ ಕಾರಣ ಈ ಬಾರಿ ಸಾವಿರಾರು ಭಕ್ತರು ಆಗಮಿಸಿ ಪೂಜಮ್ಮ ದೇವಿಯ ಪೂಜೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ನಗರಸಭಾ ಸದಸ್ಯರು, ಮುಖಂಡರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಶ್ರೀಕಾಂತ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ನಗರಸಭೆ ಸದಸ್ಯರಾದ ಸುರೇಶ್, ಟಿ.ಮಂಜುನಾಥ್, ಡಾ. ಸತ್ಯನಾರಾಯಣ ರಾವ್, ಬಿ.ಆರ್.ಅನಂತಕೃಷ್ಣ, ಆನಂದ್ ಕುಮಾರ್ ಹಾಜರಿದ್ದರು.