Sidlaghatta : ಗಣೇಶ ವಿಸರ್ಜನೆ ವೇಳೆ ತಾಲ್ಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೂ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿರುವ ಹಳೆ ರೌಡಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಸರ್ಕಲ್ ಇನ್ಸ್ ಪೆಕ್ಟರ್ ನಂದಕುಮಾರ್ ತಿಳಿಸಿದರು.
ನಗರದ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ತಾಲ್ಲೂಕಿನಾದ್ಯಂತ ಇರುವ ರೌಡಿ ಶೀಟರ್‌ಗಳಿಗೆ ಎಚ್ಚರಿಕೆ ನೀಡಿ ಅವರು ಮಾತನಾಡಿದರು.
ಈ ಹಿಂದೆ ತಮ್ಮ ಬುದ್ದಿಯನ್ನು ಕೈಗೆ ನೀಡಿ ಅಹಿತಕರ ಘಟನೆಗಳಿಗೆ ತಾವು ಕಾರಣಕರ್ತರಾಗಿದ್ದೀರಿ. ಆದರೆ ಇದೀಗ ತಮಗೆ ಒಳ್ಳೆಯವರಾಗಲು ಅವಕಾಶವಿದೆ, ಅವಕಾಶವನ್ನು ಉಪಯೋಗಿಸಿಕೊಂಡು ಸತ್ಪ್ರಜೆಗಳಾಗಿ ರೂಪುಗೊಳ್ಳಿ. ಅದು ಬಿಟ್ಟು ತಮ್ಮ ಹಳೆಯ ಚಾಳಿಯನ್ನೇ ಮುಂದುವರೆಸಿಕೊಂಡು ಅಮಾಯಕರನ್ನು ಹೆದರಿಸುವುದು ಸೇರಿದಂತೆ ರೌಡಿಸಂ ಮುಂದುವರೆಸಿದ್ದೇ ಆದಲ್ಲಿ ಮುಂದಿನ ತಮ್ಮ ಜೀವನ ಕಠಿಣವಾಗಿರುತ್ತದೆ ಎಂದರು.
ತಾಲ್ಲೂಕಿನ ರೌಡಿ ಷೀಟರ್ ಪಟ್ಟಿಯಲ್ಲಿರುವ ಬಹುತೇಕರು ಇನ್ನೂ 20-25 ವಯಸ್ಸಿನ ಆಸು ಪಾಸಿನವರಾಗಿದ್ದಾರೆ. ಐಷಾರಾಮಿ ಬದುಕು ನಡೆಸುವ ನೆಪದಲ್ಲಿ ಅಮಾಯಕರನ್ನು ಬೆದರಿಸುವುದೂ ಸೇರಿದಂತೆ ಅಹಿತಕರ ಘಟನೆಗಳಲ್ಲಿ ಪಾಲ್ಗೊಂಡಿದ್ದೇ ಆದಲ್ಲಿ ಪೊಲೀಸ್ ಇಲಾಖೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಒಳ್ಳೆಯವರಾಗಿ ಬದುಕಲು ಇದೀಗ ಇಲಾಖೆ ಅವಕಾಶ ನೀಡಿದೆ. ಒಳ್ಳೆಯವರಾಗಿ ಪರಿವರ್ತನೆಯಾಗಿ ಇಲ್ಲವಾದಲ್ಲಿ ತಮ್ಮ ತಮ್ಮ ಜೀವನವನ್ನೂ ಹಾಳು ಮಾಡಿಕೊಳ್ಳುತ್ತೀರಿ ಎಂದು ಎಚ್ಚರಿಸಿದರು.
ನಿಮ್ಮೆಲ್ಲಾ ನಡವಳಿಕೆಗಳ ಮೇಲೆ ನಮ್ಮ ಸಿಬ್ಬಂದಿ ನಿಗಾ ವಹಿಸಿರುತ್ತಾರೆ. ಹಾಗಾಗಿ ಒಳ್ಳೆಯವರಾಗಿ ಬದುಕುವ ಜೊತೆಗೆ ಸಮಾಜದ ಒಳಿತಿಗಾಗಿ ಶ್ರಮಿಸಿರಿ ಎಂದರು.
ಗ್ರಾಮಾಂತರ ಠಾಣೆ ಪಿಎಸ್ಸೈ ಸುನಿಲ್, ನಗರಠಾಣೆ ಪಿಎಸ್ಸೈ ವೇಣುಗೋಪಾಲ್, ದಿಬ್ಬೂರಹಳ್ಳಿ ಠಾಣೆ ಪಿಎಸ್ಸೈ ಕೃಷ್ಣಪ್ಪ ಹಾಜರಿದ್ದರು.